ಅನಿಲ್ ಅಂಬಾನಿ ದೇಶ ಬಿಟ್ಟು ತೆರಳುವುದನ್ನು ತಡೆಯಬೇಕೆಂದು ಸುಪ್ರೀಂ ಕೋರ್ಟಿಗೆ ಎರಿಕ್ಸನ್ ಅಪೀಲು

Update: 2018-10-03 09:41 GMT

ಹೊಸದಿಲ್ಲಿ, ಅ. 3: ರಿಲಯನ್ಸ್ ಕಮ್ಯುನಿಕೇಶನ್ಸ್ ಸಂಸ್ಥೆಯ ಅನಿಲ್ ಅಂಬಾನಿ ಮತ್ತವರ ಸಮೂಹದ ಇಬ್ಬರು ಹಿರಿಯ ಅಧಿಕಾರಿಗಳು ಭಾರತ ಬಿಟ್ಟು ತೆರಳುವುದನ್ನು ತಡೆಯಬೇಕೆಂದು ಸ್ವೀಡನ್ ಟೆಲಿಕಾಂ ಉಪಕರಣ ಕಂಪೆನಿ ಎರಿಕ್ಸನ್ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದೆ.

ಅನಿಲ್ ಅಂಬಾನಿಯ ಕಂಪೆನಿ ಈ ಹಿಂದೆ ಪಾವತಿಸುವ ಆಶ್ವಾಸನೆ ನೀಡಿದ್ದ 550 ಕೋಟಿ ರೂ. ಹಣವನ್ನು ಕಾನೂನು ಪ್ರಕ್ರಿಯೆಯನ್ನು ತಿರುಚಿ  ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡಿಲ್ಲ ಎಂದು ಎರಿಕ್ಸನ್ ಆರೋಪಿಸಿದೆ.

ಬರೋಬ್ಬರಿ 45,000 ಕೋಟಿ ರೂ. ಸಾಲದ ಹೊರೆಯಲ್ಲಿ ನಲುಗುತ್ತಿರುವ ಅನಿಲ್ ಅಂಬಾನಿಯ ಕಂಪೆನಿ ಎರಿಕ್ಸನ್ ಸಂಸ್ಥೆಗೆ ಒಟ್ಟು 1,600 ಕೋಟಿ ರೂ. ಪಾವತಿಸಬೇಕಿದ್ದರೂ ನ್ಯಾಯಾಲಯದ  ಮೇಲ್ವಿಚಾರಣೆಯಲ್ಲಿ ಪ್ರಕರಣದ ವಿಲೇವಾರಿ ನಡೆದು ಈ ವರ್ಷದ ಸೆಪ್ಟೆಂಬರ್ 30ರೊಳಗಾಗಿ ಹಣ  ಪಾವತಿಸಲಾಗುವುದು ಎಂಬ ಭರವಸೆಯ ನಂತರ ಪಾವತಿ ಮೊತ್ತವನ್ನು 550 ಕೋಟಿ ರೂ.ಗೆ ಎರಿಕ್ಸನ್ ಇಳಿಸಿತ್ತು. ಆದರೆ ಈ ಹಣ ಬಾರದೇ ಇರುವುದರಿಂದ ಈಗ ಎರಿಕ್ಸನ್ ರಿಲಯನ್ಸ್ ಕಮ್ಯುನಿಕೇಶನ್ಸ್ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ.

''ಅವರಿಗೆ ದೇಶದ ಕಾನೂನಿನ ಮೇಲೆ ಗೌರವವಿಲ್ಲ'' ಎಂದು ಎರಿಕ್ಸನ್ ಹೇಳಿದೆಯಲ್ಲದೆ ಕಂಪೆನಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ''ಅನಿಲ್ ಅಂಬಾನಿ ಮತ್ತವರ ಸಂಸ್ಥೆಯ ಇಬ್ಬರು ಅಧಿಕಾರಿಗಳು ನ್ಯಾಯಾಲಯದ ನಿರ್ದಿಷ್ಟ ಅನುಮತಿಯಿಲ್ಲದೆ ಭಾರತ ಬಿಟ್ಟು ತೆರಳದಂತೆ ಕ್ರಮಕೈಗೊಳ್ಳಬೇಕು. ನ್ಯಾಯ ದೊರೆಯಬೇಕಾದರೆ ಇಂತಹ ಕ್ರಮ ಅಗತ್ಯ'' ಎಂದು ಎರಿಕ್ಸನ್ ಹೇಳಿದೆ.

ಅನಿಲ್ ಅಂಬಾನಿ ತಮ್ಮ ಕಂಪೆನಿಯ ಸ್ವತ್ತುಗಳಾದ ಸ್ಪೆಕ್ಟ್ರಂ, ಟವರ್ ಮತ್ತು ಫೈಬರ್ ಗಳನ್ನು ಹಿರಿಯ ಸೋದರ ಮುಕೇಶ್ ಅಂಬಾನಿಯ ರಿಲಯನ್ಸ್ ಜಿಯೋಗೆ ಒಪ್ಪಂದವೊಂದರ ಮೂಲಕ ಮಾರಾಟ ಮಾಡಿ ಸುಮಾರು 25,000 ಕೋಟಿ ರೂ. ಉದ್ದೇಶ ಹೊಂದಿದ್ದರೂ ಟೆಲಿಕಾಂ ಸಚಿವಾಲಯ ರೂ 2,900 ಕೋಟಿ ಮೌಲ್ಯದ ಗ್ಯಾರೆಂಟಿ ಕೇಳಿರುವುದರಿಂದ ಈ ಪ್ರಕ್ರಿಯೆಗೆ ತೊಡಕುಂಟಾಗಿದೆ.

ಎರಿಕ್ಸನ್ ಸಂಸ್ಥೆ ನ್ಯಾಯಾಲಯಕ್ಕೆ ಮಾಡಿರುವ ಅಪೀಲು ಅಸಮರ್ಥನೀಯ ಎಂದು ಹೇಳಿರುವ ರಿಲಯುನ್ಸ್ ಕಮ್ಯುನಿಕೇಶನ್ಸ್ ಹಣ ಪಾವತಿಗೆ ಇನ್ನೂ 60 ದಿನಗಳ ಕಾಲಾವಕಾಶ ಕೇಳಿದೆ. ಟೆಲಿಕಾಂ ಸಚಿವಾಲಯದ ಬ್ಯಾಂಕ್ ಗ್ಯಾರಂಟಿ ಬೇಡಿಕೆಯನ್ನು ತಾನು ಪ್ರಶ್ನಿಸಲು ನಿರ್ಧರಿಸಿರುವುದಿಂದ ಹಣ ಪಾವತಿಸಲು ಕಾಲಾವಕಾಶ ಕೇಳಿರುವುದು ಸಮರ್ಥನೀಯ ಎಂದು ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News