ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಆಪ್ತ ಶ್ರೀನಿವಾಸ್ ಬಂಧನ

Update: 2018-10-03 15:04 GMT

ಬೆಂಗಳೂರು, ಅ.3: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣ ಸಂಬಂಧ ಬಿಜೆಪಿಯ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಆಪ್ತ ಎನ್ನಲಾದ ಬಿ.ವಿ.ಶ್ರೀನಿವಾಸ ರೆಡ್ಡಿಯನ್ನು ಲೋಕಾಯುಕ್ತ ವಿಶೇಷ ತನಿಖಾಧಿಕಾರಿಗಳು(ಎಸ್‌ಐಟಿ) ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಐಟಿ ಪೊಲೀಸ್ ಮಹಾನಿರೀಕ್ಷಕ ಎಂ.ಚಂದ್ರಶೇಖರ್, 2015ರಲ್ಲಿ ದಾಖಲಾಗಿದ್ದ ಮೊಕದ್ದಮೆ ಅನ್ವಯ ಗಣಿಗುತ್ತಿಗೆದಾರರಾದ ಜಿ.ಜನಾರ್ದನರೆಡ್ಡಿ, ಕೆ.ಎಂ.ಅಲಿಖಾನ್ ಸೇರಿದಂತೆ ಪ್ರಮುಖರು ಸಂಚು ರೂಪಿಸಿ, ಇಂಡಿಯನ್ ಮೈನ್ಸ್ ಮತ್ತು ಮಿನರಲ್ಸ್, ಗಣಿಗುತ್ತಿಗೆ ಸಂಖ್ಯೆ 2572ರ ಗುತ್ತಿಗೆದಾರರಾದ ಎನ್.ಶೇಕ್‌ಸಾಬ್ ಅವರ ಮೇಲೆ ಒತ್ತಡ ತಂದು ಬಳ್ಳಾರಿಯ ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಗಣಿ ಚಟುವಟಿಕೆಗಳನ್ನು ನಡೆಸಿದ್ದರು.

ಒತ್ತಡದ ಕಾರಣದಿಂದಾಗಿ ಶೇಕ್‌ಸಾಬ್ ಅವರು ಕೆ.ಎಂ.ಅಲಿಖಾನ್ ಅವರ ಕಂಪೆನಿ ದೇವಿ ಎಂಟರ್‌ಪ್ರೈಸಸ್‌ಗೆ ಶೇಕಡ 75ರಷ್ಟು ಪಾಲುದಾರರನ್ನಾಗಿ ನೇಮಿಸಿ, ಇಂಡಿಯನ್ ಮೈನ್ಸ್ ಮತ್ತು ಮಿನರಲ್ಸ್ ಅವರ ಗಣಿ ಗುತ್ತಿಗೆಯನ್ನು ಸಂಪೂರ್ಣವಾಗಿ ಅವರಿಗೆ ಅರ್ಪಿಸಿ, ಎಲ್ಲ ಚಟುವಟಿಕೆಗಳನ್ನು ಹಸ್ತಾಂತರ ಮಾಡಿದ್ದರು. ಈ ರೀತಿಯ ಅಕ್ರಮ ಗಣಿಗಾರಿಕೆ, ಅಕ್ರಮ ಸಾಗಾಟ ಹಾಗೂ ಕಬ್ಬಿಣದ ಅದಿರಿನ ಅಕ್ರಮ ವಹಿವಾಟಿನಿಂದ ಸರಕಾರದ ಬೊಕ್ಕಸಕ್ಕೆ ನಷ್ಟುವುಂಟಾಗಿದೆ. ಅಷ್ಟೇ ಅಲ್ಲದೆ, 2009ರ ಜುಲೈ ಗಣಿ ಪ್ರದೇಶದಲ್ಲಿ ಬರೋಬ್ಬರಿ 1 ಲಕ್ಷ 48 ಸಾವಿರಕ್ಕೂ ಅಧಿಕ ಮೈಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕಾನೂನುಬಾಹಿರವಾಗಿ ಕಳ್ಳಸಾಗಾಟ ಮಾಡಿರುವ ಆರೋಪ ಇದೆ.

ಬಂಧಿತ ಆರೋಪಿ ಬಿ.ವಿ.ಶ್ರೀನಿವಾಸ ರೆಡ್ಡಿಯೂ ಮಿನರಲ್ಸ್ ಕಂಪೆನಿಯ(ಒಎಂಸಿ) ಮಾಲಕನಾಗಿದ್ದು, ಈತ ಗಣಿ ಪ್ರದೇಶದಿಂದ ಕಬ್ಬಿಣದ ಅದಿರನ್ನು ಕಾನೂನುಬಾಹಿರವಾಗಿ ಹೊರತೆಗೆದು ಕಳ್ಳ ಸಾಗಾಟ ಮಾಡಿರುವ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ಈತನನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News