ಹನೂರು: ಅಧಿಕಾರಿಗಳಿಂದ ಗ್ರಾಮಗಳ ಲಂಬಾಣಿ ತಾಂಡಗಳಿಗೆ ಭೇಟಿ, ಕಾಮಗಾರಿ ಪರಿಶೀಲನೆ
ಹನೂರು,ಅ.3: ರಾಜ್ಯದ ಲಂಬಾಣಿ ತಾಂಡಗಳನ್ನು ಸರ್ವತೋಮುಖ ಪ್ರಗತಿಯತ್ತ ಕೊಂಡೊಯ್ಯುವುದು ತಾಂಡ ಅಭಿವೃದ್ದಿ ನಿಗಮದ ಮೂಲ ಉದ್ದೇಶ ಎಂದು ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹೀರಾಲ್ ನಾಯಕ ತಿಳಿಸಿದರು.
ತಾಲೂಕಿನ ರಾಮಾಪುರ ಜಿಪಂ ವ್ಯಾಪ್ತಿಯ ದಿನ್ನಳ್ಳಿ, ಮಾರಳ್ಳಿ ಹಾಗೂ ಇನ್ನಿತರ ಗ್ರಾಮಗಳ ಲಂಬಾಣಿ ತಾಂಡಗಳಿಗೆ ಭೇಟಿ ನೀಡಿ ಅರ್ಜುನ್ ದೊಡ್ಡಿಯಲ್ಲಿ ತಾಂಡ ಅಭಿವೃದ್ದಿ ನಿಗಮದಿಂದ ನಿರ್ಮಾಣವಾಗಿರುವ ಸೇವಾಲಾಲ್ ಸಮುದಾಯ ಭವನದ ಕಾಮಾಗಾರಿ ಮತ್ತು ಗ್ರಂಥಾಲಯವನ್ನು ಪರಿಶೀಲಿಸಿದ ನಂತರ ತಾಂಡದ ನಿವಾಸಿಗಳ ಸಮಸ್ಯೆಗಳ ಕುರಿತು ಚರ್ಚಿಸಿ ನಂತರ ಮಾತನಾಡಿದರು.
ರಾಜ್ಯದಲ್ಲಿ 3351 ತಾಂಡಗಳಿದ್ದು, ಅದರಂತೆ ತಾಂಡದ ಜನರ ಅಭಿವೃದ್ದಿಗಾಗಿ ರಾಜ್ಯದ ತಾಂಡ ನಿಗಮವು ಪ್ರತಿ ತಾಂಡಗಳಲ್ಲೂ ಸಹ ಸಿಸಿ ರಸ್ತೆ, ಗ್ರಂಥಾಲಯ, ಶುದ್ದನೀರಿನ ಘಟಕ ಸಂಪರ್ಕ ರಸ್ತೆಗಳು, ಬೀದಿ ದೀಪಗಳು, ಬಸ್‍ನಿಲುಗಡೆ ಸೇವಲಾಲ್ ಸಮುದಾಯ ಭವನ ನಿರ್ಮಾಣಮಾಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಜೊತೆಗೆ ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳ ಸಂಪ್ರದಾಯಗಳಿಗೆ ಉತ್ತೇಜನ ತರುವ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ನೀರುದ್ಯೋಗ ಹೋಗಲಾಡಿಸುವ ದಿಸೆಯಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ಕೇಂದ್ರಗಳು , ಗೃಹಪಯೋಗಿ ಯಂತ್ರಗಳ ರಿಪೇರಿಯ ತರಬೇತಿ ಕೇಂದ್ರಗಳು, ಯುವತಿಯರಿಗೂ ಸಹ ವಿವಿಧ ಕೌಶಲ್ಯ ತರಬೇತಿ ಕೇಂದ್ರಗಳನ್ನು ರೂಪಿಸಿದ್ದು, ಲಂಬಾಣಿ ತಾಂಡದ ನಿವಾಸಿಗಳು ಶೈಕ್ಷಣಿಕವಾಗಿ ಮುಂದೆ ಬರಲು ಮತ್ತು ಆರ್ಥಿಕವಾಗಿ ಸಬಲರಾಗಲೆಂದು ಸರ್ಕಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ನಂತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಂಡದ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ತಾಂಡ ನಿಗಮದ ಕಾರ್ಯಪಾಲಕ ಅಭಿಯಂತರರಾದ ನಾಗರಾಜನಾಯ್ಕ, ಅಭಿವೃದ್ದಿ ಅಧಿಕಾರಿ ಗುರುನಾಥ್, ಹೊನೇಗೌಡ, ಗ್ರಾಪಂ ಸದಸ್ಯ ಮುರುಗೇಶ್, ಜಿಲ್ಲಾ ಲಂಬಾಣಿ ನೌಕರರ ಸಂಘದ ಕಾರ್ಯದರ್ಶಿ ಎಸ್ .ಕೃಷ್ಣ, ಸಂಘಟನಾ ಕಾರ್ಯದರ್ಶಿ ದೊರೈಸ್ವಾಮಿ ಯುವಕ ಸಂಘಧ ಪದಾಧಿಕಾರಿ ಮಲ್ಲೇಶ್‍ನಾಯಕ, ಸೇರಿದಂತೆ ಇನ್ನಿತರರು ಹಾಜರಿದ್ದರು.