ಬಾಗೇಪಲ್ಲಿ: ಅಡುಗೆ ಕೆಲಸದಿಂದ ತೆಗೆದಿದ್ದಕ್ಕೆ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಮಹಿಳೆಯರ ಗುಂಪು

Update: 2018-10-04 15:17 GMT

ಬಾಗೇಪಲ್ಲಿ,ಅ.4: ಅಡುಗೆ ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯರ ಗುಂಪು ಮುಖ್ಯ ಶಿಕ್ಷಕ ಎ.ವಿ.ಶ್ರೀಧರ್ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತಾಲೂಕಿನ ಮಿಟ್ಟೇಮರಿ ಹೋಬಳಿ ಚಿನ್ನಂಪಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ.

ಗ್ರಾಮದ ಚೌಡಮ್ಮ ಎಂಬ ಮಹಿಳೆ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮಹಿಳೆ ಕೆಲಸಕ್ಕೆ ಸರಿಯಾಗಿ ಹಾಜರಾಗದೆ ಕರ್ತವ್ಯಲೋಪ ಎಸಗುವುದರ ಜತೆಗೆ ಶುಚಿತ್ವ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಳು. ಈ ಹಿನ್ನೆಲೆಯಲ್ಲಿ ಗ್ರಾಪಂ  ಅಧ್ಯಕ್ಷರ ಸೂಚನೆ ಮೇರೆಗೆ ಚೌಡಮ್ಮನನ್ನು ಬದಲಾಯಿಸಿ ರೂಪ ಎಂಬವರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.

ಆದರೆ, ಇದರಿಂದ ಕುಪಿತಗೊಂಡ ಚೌಡಮ್ಮ, ಮಗಳು ಹಾಗೂ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಮತ್ತು ಕುಟುಂಬದವರೊಂದಿಗೆ ಸೇರಿ ಸಂಜೆ ವೇಳೆ ಮಕ್ಕಳಿಗೆ ಪಾಠಗಳನ್ನು ಹೇಳುತ್ತಿದ್ದ ಮುಖ್ಯ ಶಿಕ್ಷಕನಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಭಂದ ಮುಖ್ಯ ಶಿಕ್ಷಕ ಶ್ರೀಧರ್ ಹಾಗೂ ಗ್ರಾಮಸ್ಥರು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News