×
Ad

ತೆಂಗು ಬೆಳೆಗಾರರಿಗೆ 178 ಕೋಟಿ ರೂ. ಪ್ರೋತ್ಸಾಹ ಧನ

Update: 2018-10-04 21:04 IST

ಬೆಂಗಳೂರು, ಅ.4: ಸತತ ಬರಗಾಲದಿಂದ ಸಂಪೂರ್ಣವಾಗಿ ಒಣಗಿರುವ, ಅನುತ್ಪಾದಕ ಹಂತಕ್ಕೆ ತಲುಪಿರುವ ತೆಂಗಿನ ಮರಗಳನ್ನು ಹೊಂದಿರುವ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಧನ ವಿತರಿಸಲು 178 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಈ ವಿಷಯವನ್ನು ತಿಳಿಸಿದರು. ತೆಂಗು ಬೆಳೆಗಾರರಿಗೆ ತಲಾ ಒಂದು ಮರಕ್ಕೆ 400 ರೂ. ಅಥವಾ ಹೆಕ್ಟೇರ್‌ಗೆ 18 ಸಾವಿರ ರೂ. ಆಧಾರದಲ್ಲಿ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧ ತೋಟಗಾರಿಕೆ ಇಲಾಖೆಯವರು ಚರ್ಚಿಸಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಒಂದು ವರ್ಷವಾಗಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವತಿಯಿಂದಲೇ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇದರಿಂದ, ತುಮಕೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ ಇನ್ನಿತರ ಜಿಲ್ಲೆಗಳ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

108 ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆಗಾಗಿ ಜಿವಿಕೆ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ವರ್ಷಕ್ಕೆ ಹಳೆಯ ಒಡಂಬಡಿಕೆಯನ್ನೆ ಮುಂದುವರೆಸಲಾಗುವುದು. ಅಲ್ಲದೆ, ಒಂದು ವರ್ಷದ ಒಳಗಾಗಿ ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಹಾಸನದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು 50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 129.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಯಾದಗಿರಿ, ಹುಮ್ನಾಬಾದ್, ಲಿಂಗಸುಗೂರು ಮತ್ತು ಹೊಸಪೇಟೆ ಜಿಟಿಟಿಸಿ ಕೇಂದ್ರಗಳಲ್ಲಿ ಕೇಂದ್ರಗಳನ್ನು ಡೆಸ್ಸಾಲ್ಟ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಒಟ್ಟು 224.08 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಪೈಕಿ ರಾಜ್ಯ ಸರಕಾರವು 21.7 ಕೋಟಿ ರೂ.ಗಳನ್ನು ಈ ಯೋಜನೆಗಾಗಿ ವಿನಿಯೋಗಿಸುತ್ತಿದೆ. ಇನ್ನುಳಿದ 203 ಕೋಟಿ ರೂ.ಡೆಸ್ಸಾಲ್ಟ್ ಸಿಸ್ಟಮ್ಸ್ ಸಂಸ್ಥೆಯವರು ಭರಿಸಲಿದ್ದಾರೆ ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಜ್ಯ ಆಡಳಿತ ನ್ಯಾಯಮಂಡಳಿಯ ಸದಸ್ಯ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ವಿ.ಉಮೇಶ್ ಅವರನ್ನು ನೇಮಕ ಮಾಡಲು 2016ರಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಹಿಂಪಡೆಯಲು ಹಾಗೂ ರಾಜ್ಯ ತೋಟಗಾರಿಕೆ ಉತ್ಕೃಷ್ಟ ಕೇಂದ್ರಗಳ ಏಜೆನ್ಸಿ ಎಂಬ ಹೊಸ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿರುವ 5 ಲಕ್ಷ ರೂ.ಗಳ ದಯಾತ್ಮಕ ಧನದ ಜೊತೆಗೆ ಐದು ವರ್ಷಗಳ ಕಾಲ 2 ಸಾವಿರ ರೂ.ಮಾಸಾಶನವನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೊದನೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ಪ್ರಾದೇಶಿಕ ಕಾರ್ಯಾಗಾರದ 4 ಎಕರೆ 7 ಗುಂಟೆ ಜಮೀನನ್ನು ಹಾಸನ ಸಹಕಾರಿ ಹಾಲು ಒಕ್ಕೂಟಕ್ಕೆ ಹಸ್ತಾಂತರಿಸಲು ಹಾಗೂ ರೈತ ಸಂಘ, ಕನ್ನಡ ಪರ ಸಂಘಟನೆ, ಸಾರ್ವಜನಿಕರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 14 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾಥ್‌ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕವನ್ನು 7.25 ಕೋಟಿ ರೂ.ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾಥ್‌ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕವನ್ನು 7.81 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಯ 8 ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಇಲಾಖೆಗೆ ಸೇರಿದ 45, 165 ಚದರ ಮೀಟರ್ ಜಮೀನನ್ನು ಸಮ ಮೌಲ್ಯದ ಜಮೀನು ವಿನಿಮಯ ಮತ್ತು ಪರವಾನಗಿ ಆಧಾರದಲ್ಲಿ ಪಡೆದುಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News