ಕೊಡಗು ಸಂತ್ರಸ್ತ ಕುಟುಂಬಗಳ ಮನೆ ಬಾಡಿಗೆ ರಾಜ್ಯ ಸರಕಾರ ಭರಿಸಲಿದೆ: ಸಚಿವ ಝಮೀರ್

Update: 2018-10-04 17:24 GMT

ಮಡಿಕೇರಿ, ಅ.4: ಜಲಪ್ರಳಯದಲ್ಲಿ ಜಿಲ್ಲೆಯಾದ್ಯಂತ 1,174 ಮನೆಗಳು ಸಂಪೂರ್ಣ ನಾಶಗೊಂಡಿರುವ ಬಗ್ಗೆ ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯ ಆಧಾರದಲ್ಲಿ ಪ್ರತೀ ಸಂತ್ರಸ್ತರಿಗೆ ಸರಕಾರದ ವತಿಯಿಂದಲೇ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಝಮೀರ್ ಅಹ್ಮದ್ ಭರವಸೆ ನೀಡಿದರು.

ಭೂ ಕುಸಿತ ಮತ್ತು ಪ್ರವಾಹದಿಂದ ತತ್ತರಿಸಿರುವ ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕೊಡಗು ಜಿಲ್ಲೆಗೆ 50 ಸಾವಿರ ವಿಶೇಷ ಪಡಿತರ ಕಿಟ್‌ಗಳನ್ನು ಖುದ್ದಾಗಿ ಸರಬರಾಜು ಮಾಡಲಾಗಿದೆ. ತಾನು 2 ದಿನ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಆಹಾರ ಸರಬರಾಜಿನ ಬಗ್ಗೆ ನಿಗಾ ವಹಿಸಿದ್ದೆ. ಈ ಕಿಟ್‌ಗಳನ್ನು ಸಂತ್ರಸ್ತರಿಗೆ ತಲುಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮನೆಗಳು ನಿರ್ಮಾಣವಾಗುವವರೆಗೆ ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ಮನೆಗಳಲ್ಲಿ ವಾಸಿಸಲು ತಲಾ 10 ಸಾವಿರ ರೂ. ಅನುದಾನವನ್ನು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ. 35 ಕೆ.ಜಿ. ಅಕ್ಕಿ ಸೇರಿದಂತೆ ಪಡಿತರ ಸಾಮಗ್ರಿಗಳನ್ನು ಮುಂದಿನ ತಿಂಗಳೂ ವಿತರಿಸಲು ಸರಕಾರ ತೀರ್ಮಾನಿಸಿದೆ ಎಂದು ಸಚಿವ ಝಮೀರ್ ಅಹ್ಮದ್ ತಿಳಿಸಿದರು.

ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡುವ ಮೊದಲು ಮಡಿಕೇರಿಗೆ ಆಗಮಿಸಿದ್ದ ಸಚಿವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ವಯೋವೃದ್ದರಿಗೆ ಆರ್ಥಿಕ ಸಹಾಯ ನೀಡಿದರು. ಸ್ವಸಹಾಯ ಸಂಘರ್ಷಗಳಲ್ಲಿ ಸಾಲ ಪಡೆದವರ ಸಾಲವನ್ನು ರಾಜ್ಯ ಸರಕಾರಕ್ಕೆ ಮನ್ನಾ ಮಾಡಲು ಕಷ್ಟಸಾಧ್ಯವಾಗಿದೆ. ರಾಜ್ಯದ ರೈತರ 34 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಮಹತ್ತರ ಜವಾಬ್ದಾರಿ ಸರಕಾರದ ಮೇಲಿದೆ. ಹೀಗಾಗಿ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಪತ್ರಕರ್ತರ ಪಶ್ನೆಯೊಂದಕ್ಕೆ ಉತ್ತರಿಸಿದರು.

ಮಳೆಹಾನಿಯಿಂದ ಸಂತಸ್ತರಾದ ಕುಟುಂಬಗಳು ಸ್ವಸಹಾಯ ಸಂಘಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿಯವರ ಬಳಿ ಚರ್ಚಿಸುವುದಾಗಿ ಭರವಸೆ  ನೀಡಿದ ಅವರು, ಆ ಬಳಿಕ ಸಾಧಕ-ಬಾಧಕಗಳನ್ನು ಅವಲೋಕಿಸಿ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News