ಸೌದಿ ದೊರೆಗೆ ಪರಮಾಪ್ತ ಟ್ರಂಪ್ ನೀಡಿದ ರಾಜ ಗೌರವ

Update: 2018-10-05 04:58 GMT

ಹುಲಿಯೊಂದು ತಾನು ಹಿಡಿದ ಇಲಿಯನ್ನು ಕೈಗೆತ್ತಿಕೊಂಡು, ಅದನ್ನು ಕೊಲ್ಲುವ ಮುನ್ನ ಸ್ವಲ್ಪ ಹೊತ್ತು ಅದರ ಜೊತೆ ಚೆಲ್ಲಾಟವಾಡಿ ಆನಂದಿಸೋಣವೆಂದುಕೊಂಡು ಕ್ಷೇಮ ವಿಚಾರಿಸತೊಡಗಿದಾಗ, ಬಲಿಷ್ಠ ಹುಲಿ ತನ್ನ ಮಿತ್ರನಾಗಿ ಬಿಟ್ಟಿದೆಯೆಂದು ನಂಬಿದ ಇಲಿಯು ಪರಮಾನಂದಗೊಂಡು, ನಾನೀಗ ಹುಲಿರಾಯನ ಆಪ್ತನಾದ್ದರಿಂದ ಕಾಡಿನಲ್ಲಿ ಎಲ್ಲರೂ ನನಗೆ ಅಂಜಲಾರಂಭಿಸುತ್ತಾರೆ ಎಂದು ಬೀಗತೊಡಗಿತ್ತಂತೆ. ಸದ್ಯ ತಮ್ಮ ಪರಮಾಪ್ತ ರಾಷ್ಟ್ರವೆಂದು ಅಮೆರಿಕವನ್ನು ನಂಬಿ ತಮ್ಮ ಕೊರಳನ್ನು ಅದರ ಕೈಗೆ ಕೊಟ್ಟುಬಿಟ್ಟಿರುವ ಸೌದಿ ಅರೇಬಿಯಾದ ಆಡಳಿತಗಾರರ ಸ್ಥಿತಿ, ಆ ಇಲಿಗಿಂತ ಭಿನ್ನವೇನಲ್ಲ ಎಂಬುದೀಗ ಜಗತ್ತಿಗೆಲ್ಲಾ ಮನವರಿಕೆಯಾಗಿದೆ. ‘‘ದೊರೆಗಳೇ, ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ. ನಮ್ಮ ಬೆಂಬಲ ಇಲ್ಲದಿದ್ದರೆ ನಿಮ್ಮ ಸಾಮ್ರಾಜ್ಯವು ಎರಡು ವಾರವೂ ಉಳಿಯಲಾರದು ಎಂದು ನಾನು ಸೌದಿ ದೊರೆ ಸಲ್ಮಾನ್‌ರಿಗೆ ಹೇಳಿದ್ದೇನೆ’’ ಎಂದು ಬುಧವಾರ ಡೊನಾಲ್ಡ್ ಟ್ರಂಪ್ ಜಗತ್ತಿಗೆಲ್ಲಾ ಕೇಳುವಂತೆ ಬಹಿರಂಗ ಸಭೆಯೊಂದರಲ್ಲಿ ಘೋಷಿಸಿದ್ದಾರೆ. ಅವರು ಮಾತನಾಡಿದ ಧಾಟಿ ನೋಡಿದರೆ ಸೌದಿ ಅರೇಬಿಯಾ ಎಂಬುದು ಅಮೆರಿಕದ ಮಾಲಕತ್ವದಲ್ಲಿರುವ ಒಂದು ವಿಧೇಯ, ಪುಟಾಣಿ ವಸಾಹತು ಮಾತ್ರ ಎಂಬಂತಿತ್ತು.

ಸೌದಿ ಅರೇಬಿಯಾದ ಸರಕಾರ ಹಾಗೂ ಅಲ್ಲಿಯ ಜನತೆಯ ಘನತೆ, ಗೌರವ, ಸ್ವಾಭಿಮಾನ ಇತ್ಯಾದಿಗಳಿಗೆ ಟ್ರಂಪ್ ದೃಷ್ಟಿಯಲ್ಲಿ ಚಿಕ್ಕಾಸಿನ ಬೆಲೆಯೂ ಇಲ್ಲವೆಂಬುವುದು ಅವರ ಹೇಳಿಕೆಯಿಂದ ವ್ಯಕ್ತವಾಗಿತ್ತು. ತಾನು ಖಾಸಗಿಯಾಗಿ ಹೇಳಿದ್ದನ್ನು ಟ್ರಂಪ್ ಖಾಸಗಿಯಾಗಿಯೇ ಇಟ್ಟಿದ್ದರೆ ಚೆನ್ನಾಗಿತ್ತು. ಈ ರೀತಿ ಬಹಿರಂಗವಾಗಿ ಅದನ್ನು ಘೋಷಿಸುವ ಮೂಲಕ ಅವರು ಒಂದೆಡೆ ಸೌದಿ ಅರೇಬಿಯಾ ಎಂಬ ಮಿತ್ರ ರಾಷ್ಟ್ರದ ಆಡಳಿತಗಾರರ ಬಗ್ಗೆ ತನಗಿರುವ ಅಪಾರ ತಾತ್ಸಾರವನ್ನು ಪ್ರಕಟಿಸಿಬಿಟ್ಟಿದ್ದಾರೆ. ಇನ್ನೊಂದೆಡೆ ತಮ್ಮ ಸ್ವಾತಂತ್ರ, ಸ್ವಾಭಿಮಾನಗಳನ್ನೆಲ್ಲ ಅಮೆರಿಕದ ಬಳಿ ಅಡವಿಟ್ಟು ಅದು ತಮ್ಮನ್ನು ಸದಾ ರಕ್ಷಿಸುತ್ತದೆ ಎಂಬ ಭ್ರಮೆಯಲ್ಲಿದ್ದ ಸೌದಿ ದೊರೆಗಳ ಮಾನವನ್ನು ಲೋಕದ ಮುಂದೆ ಚಿಂದಿ ಮಾಡಿದ್ದಾರೆ. ಇಷ್ಟು ವರ್ಷ ಸ್ವತಃ ತನ್ನ ಪ್ರಜೆಗಳ, ತನ್ನ ಆರ್ಥಿಕತೆಯ, ತನ್ನ ಭದ್ರತೆಯ ಮತ್ತು ಸಂಪೂರ್ಣ ಅರಬ್ ಜಗತ್ತಿನ ಹಿತಾಸಕ್ತಿಗಳನ್ನೆಲ್ಲಾ ಬಲಿಕೊಟ್ಟು ಸೌದಿ ಸರಕಾರವು ಅಮೆರಿಕದ ಚಾಕರಿ ನಡೆಸಿದ್ದಕ್ಕೆ ಈ ಮೂಲಕ ಅರ್ಹ ಪ್ರತಿಫಲ ಸಿಕ್ಕಂತಾಗಿದೆ. ನಾವು ಮನಸ್ಸು ಮಾಡಿದರೆ ಕ್ಷಣಮಾತ್ರದಲ್ಲಿ ಖತರ್ ದೇಶವನ್ನು ಅಥವಾ ಯಮನ್ ದೇಶವನ್ನು ನಾಶಮಾಡಬಲ್ಲೆವೆಂದು ಬೊಗಳೆ ಬಿಡುತ್ತಿದ್ದ ದೊರೆ ಸಲ್ಮಾನ್ ಆಗಲಿ ಅವರ ಪರಮ ಕ್ರೂರ ‘ಪ್ರಗತಿಪರ’ ರಾಜಕುಮಾರ ನಾಗಲಿ ಟ್ರಂಪ್ ಅವರ ಈ ಘೋರ ಅಪಮಾನ ಜನಕ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಎರಡೇ ತಿಂಗಳ ಹಿಂದೆ, ಸೌದಿ ಸರಕಾರವು ತಾನು ಬಂಧಿಸಿರುವ ಮಾನವ ಹಕ್ಕು ಹೋರಾಟಗಾರರನ್ನು ಮತ್ತು ನಿರಪರಾಧಿ ನಾಗರಿಕರನ್ನು ಬಿಡುಗಡೆಗೊಳಿಸಬೇಕೆಂದು ಕೆನಡಾದ ವಿದೇಶಾಂಗ ಸಚಿವೆ ಕ್ರಿಸ್ಟಿಯಾ ಫ್ರೀ ಲ್ಯಾನ್ಡ್ ಅವರು ಟ್ವೀಟ್ ಮಾಡಿದರೆಂಬ ಕಾರಣಕ್ಕೆ ಕೆಂಡಾಮಂಡಲವಾಗಿದ್ದ ಸೌದಿ ಸರಕಾರವು ಇದನ್ನು, ತಮ್ಮ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪವೆಂದು ಕರೆದು ಅತ್ಯುಗ್ರ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿತ್ತು. ಅದು ತನ್ನ ದೇಶದಲ್ಲಿದ್ದ ಕೆನಡಾ ರಾಯಭಾರಿಯನ್ನು ಪದಚ್ಯುತಗೊಳಿಸಿತ್ತು, ಕೆನಡಾದಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸು ಕರೆಸಿಕೊಂಡಿತ್ತು, ಕೆನಡಾ ಮತ್ತು ಸೌದಿಯ ನಡುವಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಕೆನಡಾದಲ್ಲಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದ ಸೌದಿ ಮೂಲದ ವಿದ್ಯಾರ್ಥಿಗಳೆಲ್ಲಾ ಕೆನಡಾ ಬಿಟ್ಟು ಬೇರೆ ದೇಶಗಳಲ್ಲಿ ವಿದ್ಯಾರ್ಜನೆ ಮುಂದುವರಿಸಬೇಕೆಂದು ಆದೇಶ ಹೊರಡಿಸಿತ್ತು. ಆ ಪರಾಕ್ರಮದ ಒಂದಂಶವನ್ನಾದರೂ ಅವರು ಟ್ರಂಪ್ ಮುಂದೆ ತೋರಿಸಿಲ್ಲ.

ಕಳೆದ ವಾರವಷ್ಟೇ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಟ್ರಂಪ್ ಹೆಚ್ಚಿನ ಒಪೆಕ್ ದೇಶಗಳನ್ನು ನಾವು ಉಚಿತವಾಗಿ ಸಂರಕ್ಷಿಸುತ್ತಿದ್ದೇವೆ. ಅವರು ಇದರ ಲಾಭ ಪಡೆದು ತೈಲದ ಬೆಲೆ ಹೆಚ್ಚಿಸಿ ನಮಗೆ ಮಾರುತ್ತಿದ್ದಾರೆ. ಇದು ಒಳ್ಳೆಯದಲ್ಲ. ಅವರು ಬೆಲೆ ಏರಿಕೆಯನ್ನು ತಡೆಯಬೇಕು, ಮಾತ್ರವಲ್ಲ, ಬೆಲೆಗಳನ್ನು ಇಳಿಸಲು ಆರಂಭಿಸಬೇಕು ಮತ್ತು ನಾವು ಅವರಿಗೆ ಒದಗಿಸುತ್ತಿರುವ ಮಿಲಿಟರಿ ರಕ್ಷಣೆಗಾಗಿ ನಮಗೆ ಸೂಕ್ತ ಬೆಲೆ ಪಾವತಿಸಬೇಕು ಎಂದಿದ್ದರು. ಯಾವುದೇ ಸ್ವಾಭಿಮಾನಿ ದೇಶವಾಗಲಿ ಜನತೆಯಾಗಲಿ ಈ ಮಟ್ಟದ ಒರಟು ಹಾಗೂ ಅಪಮಾನಕಾರಿ ಮಾತನ್ನು ಕೇಳಿ ಸುಮ್ಮನಿರ ಲಾರರು. ನಿಮ್ಮಂತಹವರ ಹಂಗು ಬೇಡವೆಂದು ತಮ್ಮ ರಕ್ಷಣೆಗೆ ಪರ್ಯಾಯ ದಾರಿಗಳನ್ನು ಕಂಡು ಕೊಳ್ಳುವರು. ಆದರೆ ಸದ್ಯ ಅಂತಹದೇನೂ ಆಗಿಲ್ಲ ಎಂಬುದು ಅಮೆರಿಕ ಮತ್ತು ಅರಬ್ ರಾಷ್ಟ್ರಗಳ ಸಂಬಂಧ ಒಡೆಯ ಮತ್ತು ದಾಸರ ಸಂಬಂಧವೇ ಹೊರತು ಮೈತ್ರಿಯ ಸಂಬಂಧವಂತೂ ಅಲ್ಲ ಎಂಬುದಕ್ಕೆ ನಿಚ್ಚಳ ಪುರಾವೆಯಾಗಿದೆ. ಈ ಬೆಳವಣಿಗೆಯಿಂದ ಸೌದಿ ಸರಕಾರಕ್ಕೆ ತೀವ್ರ ಮುಜುಗರವಾಗಿರಬಹುದು, ಅವರ ಒಣ ಪ್ರತಿಷ್ಠೆಗೆ ಘಾಸಿಯಾಗಿರಬಹುದು. ಆದರೆ ಸೌದಿ ಅರೇಬಿಯಾದ ನಾಗರಿಕರಿಗೆ ಅಥವಾ ಅರಬ್ ಜಗತ್ತಿನ ಜನಸಾಮಾನ್ಯರಿಗೆ ಕಿಂಚಿತ್ತೂ ಅಚ್ಚರಿಯಾಗಿರಲಾರದು. ಯಾಕೆಂದರೆ ಅಮೆರಿಕದ ಸ್ನೇಹವೆಂದರೆ ಅದೆಂತಹ ಭಯಾನಕ ಮೋಸದ ಜಾಲ ಎಂಬುದು, ವಿಯೆಟ್ನಾಮ್ ಮತ್ತು ಅಫ್ಘಾನಿಸ್ತಾನದವರಷ್ಟೇ ಸ್ಪಷ್ಟವಾಗಿ ಸೌದಿಯ ಜನತೆಗೆ ಮತ್ತು ಹೆಚ್ಚಿನೆಲ್ಲ ಅರಬ್ ನಾಗರಿಕರರಿಗೆ ಚೆನ್ನಾಗಿ ತಿಳಿದಿದೆ.

ತಾನು ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾಸತ್ತಾತ್ಮಕ ದೇಶ ಎಂದು ಹೇಳಿಕೊಳ್ಳುವ ಮತ್ತು ಜಗತ್ತಿನೆಲ್ಲೆಡೆ ಪ್ರಜಾಸತ್ತೆಯನ್ನು ಬಲಪಡಿಸುವ ಪ್ರಕ್ರಿಯೆಗೆ ತನ್ನ ಬದ್ಧತೆ ಪ್ರಕಟಿಸುವ ಅಮೆರಿಕದ ದ್ವಂದ್ವ ನೀತಿಯನ್ನು ಅವರು ಕಂಡಿದ್ದಾರೆ ಮಾತ್ರವಲ್ಲ, ಅನುಭವಿಸಿಯೂ ಇದ್ದಾರೆ. ಸಂಪೂರ್ಣ ಅರಬ್ ಜಗತ್ತಿನಲ್ಲಿ ಎಲ್ಲೂ ಪ್ರಜಾಸತ್ತೆ ತಲೆ ಎತ್ತದಂತೆ ಅಮೆರಿಕ ಕೈಗೊಂಡ ಕ್ರೂರ ಮತ್ತು ಅಮಾನುಷ ಉಪಕ್ರಮಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಅರಬ್ ದೇಶಗಳ ಜನತೆಯ ಭಾವನೆಗಳಿಗಾಗಲಿ ಅವರ ಮೂಲಭೂತ ಮಾನವೀಯ ಹಕ್ಕುಗಳಿಗಾಗಲಿ ಅಮೆರಿಕ ಅರೆಕಾಸಿನ ಬೆಲೆ ಕೊಟ್ಟಿಲ್ಲ. ಯಾರಾದರೂ ಪ್ರಜಾಸತ್ತೆಯ ಅಥವಾ ಮಾನವ ಹಕ್ಕುಗಳ ಪರವಾಗಿ ಒಂದಕ್ಷರ ಮಾತನಾಡಿದರೆ ಅವರನ್ನು ಮತ್ತವರ ಪರಿವಾರವನ್ನೂ ಚಿತ್ರ ಹಿಂಸೆ ಕೊಟ್ಟು ಕೊಲ್ಲುವ ಸರ್ವಾಧಿಕಾರಿಗಳನ್ನು ಮತ್ತು ರಾಜ ಮಹಾರಾಜರುಗಳನ್ನು ಪೋಷಿಸುತ್ತಾ ಬಂದಿದೆ.

ಈ ಪೋಷಣೆ ಕೂಡಾ ಅವಲಂಬನೀಯವೇನಲ್ಲ. ಯಾರಾದರೊಬ್ಬ ದೊರೆ ಅಥವಾ ಸರ್ವಾಧಿಕಾರಿ ಅಮೆರಿಕದ ಆದೇಶಗಳನ್ನು ಪಾಲಿಸುವಲ್ಲಿ ಕಿಂಚಿತ್ ಎಡವಿದರೂ ಸಾಕು, ಅಮೆರಿಕ ಅಂಥವರನ್ನು ಅಪಮಾನಿಸಿ ಕ್ರೂರವಾಗಿ ಮುಗಿಸಿಬಿಡುವ ಮೂಲಕ, ಇತರ ಸರ್ವಾಧಿಕಾರಿಗಳಿಗೆ ವಿಧೇಯತೆಯ ಅಪೇಕ್ಷಿತ ಮಟ್ಟ ಏನೆಂಬುದನ್ನು ನೆನಪಿಸುತ್ತದೆ. ಸದ್ದಾಮ್ ಹುಸೈನ್ ಮತ್ತು ಕರ್ನಲ್ ಗದ್ದಾಫಿ ಎಂಬ ಸರ್ವಾಧಿಕಾರಿಗಳ ಅಂತ್ಯವನ್ನು ಯಾರು ತಾನೆ ಮರೆಯಲು ಸಾಧ್ಯ? ಆ ದುರ್ಗತಿ ಇತರ ಸರ್ವಾಧಿಕಾರಿಗಳಿಗೆ ಒದಗಲಾರದೆಂಬ ಗ್ಯಾರಂಟಿಯೇನೂ ಇಲ್ಲ. ಅರಬ್ ರಾಷ್ಟ್ರಗಳನ್ನು ಅಲ್ಲಿನ ಸರಕಾರಗಳ ಮಾಧ್ಯಮದಿಂದಲೇ ದೋಚುತ್ತ ಬಂದಿರುವ ಅಮೆರಿಕ, ಒಂದೊಂದೇ ಅರಬ್ ರಾಷ್ಟ್ರವನ್ನು ಯುದ್ಧ, ಬಹಿಷ್ಕಾರ, ದಿಗ್ಬಂಧನ, ಮಿಲಿಟರಿ ದಂಗೆ, ಅಂತಃಕಲಹ ಇತ್ಯಾದಿ ಮಾರ್ಗಗಳಿಂದ ಅಸ್ಥಿರತೆ ಮತ್ತು ಅರಾಜಕತೆಗೆ ತಳ್ಳುತ್ತಿದೆ. ಒಂದು ಕಾಲದಲ್ಲಿ ಬಲಿಷ್ಠ ವಾಗಿದ್ದ ಇರಾಕ್ ಮತ್ತು ಲಿಬಿಯಾ ಇಂದು ಶಿಥಿಲವಾಗಿವೆ.

ಅಮೆರಿಕದ ಅತೀ ದೊಡ್ಡ ಸೇನಾ ನೆಲೆಗೆ ಆಶ್ರಯ ನೀಡಿರುವ ಖತರ್ ಎಂಬ ಅಮೆರಿಕದ ಒಂದು ಮಿತ್ರ ರಾಷ್ಟ್ರವು ಇದೀಗ ಸೌದಿ, ಯುಎಇ ಮತ್ತಿತರ ಅಮೆರಿಕದ ಮಿತ್ರ ರಾಷ್ಟ್ರಗಳ ಕಡೆಯಿಂದ ಭಾರೀ ಕಟ್ಟು ನಿಟ್ಟಿನ ಬಹಿಷ್ಕಾರವನ್ನು ಎದುರಿಸುತ್ತಿದೆ. ಇಸ್ರೇಲ್ ಜೊತೆ ಪರಿಪೂರ್ಣ ಶಾಂತಿಯಲ್ಲಿರುವ ಸೌದಿ ಸರಕಾರ ತನ್ನ ನೆರೆಯ ಬಡ ದೇಶ ಯಮನ್ ವಿರುದ್ಧ ಭೀಕರ, ದೀರ್ಘಕಾಲೀನ ಯುದ್ಧದಲ್ಲಿ ನಿರತವಾಗಿದೆ. ಸೌದಿಯ ಸರ್ವಾಧಿಕಾರಿ ದೊರೆ ಮನೆತನದವರು ಅಧಿಕೃತವಾಗಿ ಅಮೆರಿಕದ ನಿಶ್ಶರ್ತ ಹಾಗೂ ಪರಿಪೂರ್ಣ ದಾಸ್ಯ ಸ್ವೀಕರಿಸಿ, ಅವರ ಪಾದ ಸೇವೆ ಆರಂಭಿಸಿ ಈಗಾಗಲೇ ಹಲವು ದಶಕಗಳು ಉರುಳಿವೆ. ಮೊದ ಮೊದಲು ಅವರು ಈ ತಮ್ಮ ದಾಸ್ಯದ ಬಗ್ಗೆ ಒಂದಿಷ್ಟು ಮುಚ್ಚುಮರೆಯನ್ನಾದರೂ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಯಾವ ಮುಚ್ಚು ಮರೆಯೂ ಉಳಿದಿಲ್ಲ. ಅಮೆರಿಕದ ಪರಮೋಚ್ಚ ಭಟ್ಟಂಗಿ ಎಂಬ ಪದವಿಯನ್ನೇ ಅಭಿಮಾನದಿಂದ ಸ್ವೀಕರಿಸಿಕೊಂಡಿರುವ ಸೌದಿ ಆಡಳಿತಗಾರರು ಹಾಗೆಂದು ಜಂಬ ಕೊಚ್ಚಿಕೊಳ್ಳುವುದೂ ಇದೆ. ಕಳೆದ ಕೆಲವು ದಶಕಗಳಲ್ಲಿ, ಯಾವುದೇ ವಿಷಯದಲ್ಲಿ ಸೌದಿ ಸರಕಾರವು ಅಮೆರಿಕದ ಯಾವುದೇ ಧೋರಣೆಯನ್ನಾಗಲಿ, ನಿರ್ಧಾರವನ್ನಾಗಲಿ ಗಂಭೀರವಾಗಿ ವಿರೋಧಿಸಿದ ದಾಖಲೆ ಇಲ್ಲ. ದಾಖಲೆ ಏನಾದರೂ ಇದ್ದರೆ, ಅಮೆರಿಕವನ್ನು ಟೀಕಿಸುವ ತನ್ನ ಪೌರರನ್ನು ಮತ್ತು ವಿದ್ವಾಂಸರನ್ನು ವಿಚಾರಣೆ ಇಲ್ಲದೆ ಜೈಲಿಗೆ ತಳ್ಳುವ, ಕೊಂದು ಬಿಡುವ ಅಥವಾ ಹಠಾತ್ತನೆ ‘ಕಣ್ಮರೆ’ಯಾಗಿಸಿ ಬಿಡುವ ದಾಖಲೆ ಮಾತ್ರ. ಇಸ್ರೇಲ್ ನ ವಿಷಯದಲ್ಲಂತೂ ಅಪರೂಪಕ್ಕೊಮ್ಮೆ ಬಹಿರಂಗವಾಗಿ ಸೌಮ್ಯ ಖಂಡನೆಯ ಔಪಚಾರಿಕ ಹೇಳಿಕೆಯೊಂದನ್ನು ನೀಡುವುದು ಮತ್ತು ತೆರೆಮರೆಯಲ್ಲಿ ಎಲ್ಲ ಬಗೆಯ ಸ್ನೇಹ ವ್ಯವಹಾರ ನಡೆಸುವುದು, ಜೊತೆಗೆ ಅರಬ್ ದೇಶಗಳಿಗೆ ಅಪಾಯವಿರುವುದು ಇರಾನ್‌ನಿಂದಲೇ ಹೊರತು ಇಸ್ರೇಲ್‌ನಿಂದಲ್ಲ ಎಂದು ಪ್ರಚಾರ ಮಾಡುವುದು - ಇದುವೇ ಸೌದಿ ಧೋರಣೆಯಾಗಿದೆ. ಸೋವಿಯತ್ ಒಕ್ಕೂಟದ ಪತನದ ಬಳಿಕ ಅಮೆರಿಕಕ್ಕೆ ಎದುರಾಗಿರುವ ಅತಿದೊಡ್ಡ ಸವಾಲು ಎಂಬುದು ಅಧ್ಯಕ್ಷ ಟ್ರಂಪ್‌ರಿಗಿರುವ ಸಾವಿರ ಬಿರುದುಗಳಲ್ಲಿ ಒಂದು ಮಾತ್ರ. ತನ್ನ ತೀರಾ ಒರಟು ಹಾಗೂ ಅಶ್ಲೀಲ ಭಾಷೆಗಾಗಿ ಕುಖ್ಯಾತರಾಗಿರುವ ಟ್ರಂಪ್, ಲೈಂಗಿಕ ದೌರ್ಜನ್ಯದ ಹತ್ತಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ, ಆರ್ಥಿಕ ದುರ್ವ್ಯವಹಾರ ಮತ್ತು ಖಾಸಗಿ ಬೇಹುಗಾರಿಕೆ ಸಂಬಂಧಿಸಿದ ಕೇಸುಗಳು ಹಾಗೂ ಆರೋಪಗಳು ಬೇರೆ ಇವೆ.

ಜುಲೈ ತಿಂಗಳಲ್ಲಿ ಟ್ರಂಪ್, ತಾನು ಸೌದಿ ದೊರೆಗಳ ಜೊತೆ ಮಾತನಾಡಿದ್ದು, ಅವರು ನಾಳೆಯಿಂದ ತಮ್ಮ ನಿತ್ಯ ಕಚ್ಚಾ ತೈಲ ಉತ್ಪಾದನೆಯಲ್ಲಿ 20 ಲಕ್ಷ ಬ್ಯಾರಲ್ ಗಳಷ್ಟು ಹೆಚ್ಚಳ ಮಾಡಲಿದ್ದಾರೆ ಎಂದು ಟ್ವೀಟಿಸಿ ಬಿಟ್ಟಿದ್ದರು. ನಿಜವಾಗಿ ಸೌದಿ ಸರಕಾರ ಅಂತಹ ಯಾವುದೇ ಆಶ್ವಾಸನೆ ನೀಡಿರಲಿಲ್ಲ. ಒಂದು ಸ್ವತಂತ್ರ ದೇಶ ಎಷ್ಟು ತೈಲ ಉತ್ಪಾದಿಸಬೇಕೆಂದು ಅದೇ ದೇಶದವರು ನಿರ್ಧರಿಸಬೇಕು. ಈ ವಿಷಯದಲ್ಲಿ ಅನ್ಯರ ಹಸ್ತಕ್ಷೇಪವನ್ನು ಯಾವ ಸ್ವಾಭಿಮಾನಿ ದೇಶವೂ ಸಹಿಸದು. ಆದರೆ ಟ್ರಂಪ್ ಧಣಿಗಳ ಯಡವಟ್ಟಿನ ವಿರುದ್ಧ ಸೌದಿಯ ಕಡೆಯಿಂದ ಯಾವುದೇ ಆಕ್ರೋಶ ಪ್ರಕಟವಾಗಲಿಲ್ಲ. ಸೌಮ್ಯ ಸ್ಪಷ್ಟೀಕರಣ ಮಾತ್ರ ಬಂತು. ಕೊನೆಗೆ ಅಧಿಕೃತವಾಗಿ ಶ್ವೇತಭವನ ದಿಂದಲೂ ಈ ಕುರಿತು ಸ್ಪಷ್ಟೀಕರಣ ಪ್ರಕಟವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News