×
Ad

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ: ಮಾಜಿ ಸಚಿವ ಎಸ್.ಶಿವಣ್ಣ

Update: 2018-10-05 19:11 IST

ತುಮಕೂರು,ಅ.05: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರ ನಾಲ್ಕು ಗುಂಪಿನ ಸರಕಾರವಾಗಿದ್ದು, ಜಾತಿಗೊಂದು, ಗುಂಪಿಗೊಂದು ಸರಕಾರ ರಚಿಸಿಕೊಂಡು ಆಡಳಿತ ನಡೆಸುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಮಾಜಿ ಸಚಿವ ಎಸ್.ಶಿವಣ್ಣ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗಂತೂ ತಲೆ ಕಡಿದು ಪೊಲೀಸ್ ಠಾಣೆಗೆ ರುಂಡವನ್ನು ಕೊಂಡೊಯ್ಯುತ್ತಿರುವ ದುಷ್ಕೃತ್ಯಗಳು, ನಡು ರಸ್ತೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡುವಂತಹ ಭಯಾನಕ ಕೃತ್ಯಗಳು ನಡೆಯುತ್ತಿದ್ದರೂ ಸರಕಾರ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಹಿಸಿದೆ. ಇದೆಲ್ಲವನ್ನೂ ಗಮನಿಸಿದರೆ ಸರಕಾರ ಸತ್ತು ಹೋಗಿದೆ ಅನ್ನಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ದಿನೇ ದಿನೇ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಈ ಬಗ್ಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಉಪಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿ ಪರಮೇಶ್ವರ್ ಗೆ ರಾತ್ರೋ ರಾತ್ರೊ 350 ಅಧಿಕಾರಿಗಳ ವರ್ಗಾವಣೆ ಬಗ್ಗೆಯೇ ಅರಿವಿಲ್ಲ ಎಂದ ಮೇಲೆ, ಹೇಗೆ ಕಾನೂನು ಸುವ್ಯವಸ್ಥೆ ಹತೋಟಿಗೆ ತರಬಲ್ಲರು. ಒಟ್ಟಾರೆ ರಾಜ್ಯದಲ್ಲಿ ಸರಕಾರವೇ ಇಲ್ಲ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಲ್ಯಾಂಡ್ ಮಾಫಿಯಾ, ಮೀಟರ್ ಬಡ್ಡಿ ದಂಧೆ ಸೇರಿದಂತೆ ಇತರೆ ಹಲವು ದಂಧೆಗಳಿಂದ ತುಮಕೂರಿನ ಪ್ರತಿಯೊಂದು ವಾರ್ಡಿಗೂ ಪುಡಿ ರೌಡಿಗಳು ಹುಟ್ಟಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಅವರನ್ನು ಮಟ್ಟ ಹಾಕಲಾಗುತ್ತಿಲ್ಲ. ಇಂತಹ ಮಾಫಿಯಾದವರಿಗೆ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.

ಎಲ್ಲಾ ಪಕ್ಷಗಳಲ್ಲೂ ಅಪ್ಪಮಕ್ಕಳದ್ದೇ ದರ್ಬಾರು. ಸ್ವಜನ ಪಕ್ಷಪಾತ ಇಂತಹ ರಾಜಕಾರಣಿಗಳಿಂದಲೇ ರೌಡಿಗಳು ಬೆಳೆಯುತ್ತಿದ್ದು, ತಮ್ಮ ಆಸ್ತಿಯನ್ನು ಕಾಯಲು ಬೇರೆಯವರನ್ನು ರೌಡಿಯನ್ನಾಗಿ ಬೆಳೆಸುವಂತಹ ಪ್ರವೃತ್ತಿ ಇಂದಿನ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು,ಮಧ್ಯವರ್ತಿಗಳಲ್ಲಿ ಯಥೇಚ್ಚವಾಗಿದೆ. ಈ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂದರೆ ಒಂದಲ್ಲಾ ಒಂದು ದಿನ ಸರ್ವನಾಶದ ಅಂಚಿಗೆ ತಲುಪಿದ್ದೇವೆ ಅನ್ನಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಗಳು ಎರಡು ಕೈಗಳಿದ್ದಂತೆ. ಈ ಇಬ್ಬರಿಗೂ ಪರಮಾಧಿಕಾರವಿದೆ. ಇಂತಹ ಅಧಿಕಾರವನ್ನು ಬಳಸಿಕೊಂಡು ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸಿದರೆ ಸತ್ಯಾಗ್ರಹ ಮಾಡಿ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಸಿಂಹರಾವ್, ಕೆ.ಪಿ.ಮಹೇಶ್, ಶಾಂತರಾಜು, ಬನಶಂಕರಿ ಬಾಬು, ಊರುಕೆರೆ ನಂಜುಂಡಪ್ಪ, ಜಿ.ಕೆ. ಬಸವರಾಜು, ಗೋಪಾಲಕೃಷ್ಣ, ಕೆ.ಹರೀಶ್, ಮದನ್‍ಸಿಂಗ್, ಎನ್. ಗಣೇಶ್, ನವೀನ್, ಕನ್ನಡ ಪ್ರಕಾಶ್, ಬಡ್ಡಿಹಳ್ಳಿ ಚಂದ್ರಣ್ಣ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News