ನನಗೂ ಸಚಿವ ಸ್ಥಾನ ಕೊಡಲೇಬೇಕು: ಕುಂದಗೋಳ ಕ್ಷೇತ್ರ ಶಾಸಕ ಸಿ.ಎಸ್.ಶಿವಳ್ಳಿ
Update: 2018-10-05 20:16 IST
ಧಾರವಾಡ, ಅ.5: ಉತ್ತರ ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನ ನೀಡಿ ಅಂತ ಬೇಡಿಕೆ ಇಟ್ಟಿದ್ದು, ಸಚಿವ ಸಂಪುಟ ವಿಸ್ತರಣೆಯಾದರೆ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಕುಂದಗೋಳ ಕ್ಷೇತ್ರದ ಶಾಸಕ ಸಿ.ಎಸ್.ಶಿವಳ್ಳಿ ಒತ್ತಾಯಿಸಿದ್ದಾರೆ.
ನಗರದ ಕೇಂದ್ರ ಕಾರಾಗೃಹದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸಜಾ ಬಂಧಿಗಳ ಬಿಡುಗಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡದೇ ಹೋದರೆ ಬಂಡಾಯ ಏಳುವುದಿಲ್ಲ. ನನ್ನನ್ನು ಜನ ಕಾಂಗ್ರೆಸ್‌ನಿಂದ ಆರಿಸಿದ್ದು, ಅಲ್ಲಿಯೇ ಮುಂದುವರೆಯುತ್ತೇನೆ ಎಂದರು.
ಧಾರವಾಡದಲ್ಲಿನ ನೀರಾವರಿ ನಿಗಮ ಸ್ಥಳಾಂತರ ವಿಷಯದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಧಾರವಾಡದಿಂದ ಈ ನಿಗಮ ಸ್ಥಳಾಂತರ ಆಗಲು ಬಿಡುವುದಿಲ್ಲ. ಮುಖ್ಯಮಂತ್ರಿಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷ ಮಾಡಿಲ್ಲವೆಂದು ಅವರು ಸಮರ್ಥಿಸಿಕೊಂಡರು.