ಶಿವಮೊಗ್ಗ: ಸನ್ನಡತೆ ಆಧಾರದಲ್ಲಿ ಬಂಧಿಗಳಿಬ್ಬರ ಅವಧಿಪೂರ್ವ ಬಿಡುಗಡೆ

Update: 2018-10-05 16:44 GMT

ಶಿವಮೊಗ್ಗ, ಅ.5: ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನೋತ್ಸವದ ಅಂಗವಾಗಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆಗುಂಬೆಯ ಪುಟ್ಟರಾಜು ಮತ್ತು ಜಯಂತಿ ಗ್ರಾಮದ ತಿಮ್ಮಪ್ಪಎಂಬವರನ್ನು ಸನ್ನಡತೆಯ ಆಧಾರದ ಮೇಲೆ ಶುಕ್ರವಾರ ಅವಧಿ ಪೂರ್ವ ಬಿಡುಗಡೆಗೊಳಿಸಲಾಯಿತು.

ಈ ಸಂಬಂಧ ಸೋಗಾನೆ ಜಿಲ್ಲಾ ಕಾರಾಗೃಹದಲ್ಲಿ ಸರಳ ಸಮಾರಂಭ ಕೂಡ ಆಯೋಜಿಸಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಮಾತನಾಡಿ, ಮನುಷ್ಯನ ಅತಿಯಾದ ಆಸೆಯು ಅಹಿತಕರ ಘಟನೆಗಳಿಗೆ, ಅಪರಾಧ ಕಾರ್ಯಗಳಿಗೆ ಪ್ರೇರೇಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮಗಿರುವ ಇತಿಮಿತಿಯಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳಲು ಯತ್ನಿಸಬೇಕು ಎಂದರು.

ಸಮಾಜದಲ್ಲಿ ಬದುಕಲಿಚ್ಛಿಸುವ ಪ್ರತಿಯೊಬ್ಬರೂ ಮಾನವೀಯ ಗುಣಗಳನ್ನು ಹೊಂದಿರಬೇಕು. ಆಗ ಸಹಜವಾಗಿ ಸಮಾಜದಲ್ಲಿ ಸಮಾನತೆ, ಭ್ರಾತೃತ್ವದ ಭಾವನೆ ಎಲ್ಲರಲ್ಲೂ ಕಾಣಬಹುದಾಗಿದೆ. ಗಾಂಧೀಜಿಯವರೂ ಕೂಡ ಅಪರಾಧಮುಕ್ತ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದರು ಎಂದು ಹೇಳಿದರು.

ಕಾರಾಗೃಹಗಳು ತಪ್ಪುಎಸಗಿದವರಿಗೆ ಮನಪರಿವರ್ತನೆಯ ಕೇಂದ್ರಗಳಾಗಿರಲಿವೆ. ಬಂಧಿಗಳು ತಮ್ಮ ಶಿಕ್ಷಾ ಅವಧಿಯಲ್ಲಿ ಮನಪರಿವರ್ತನೆ ಮಾಡಿಕೊಳ್ಳುವುದರ ಜೊತೆಗೆ ಸನ್ನಡತೆಯಿಂದ ನಡೆದುಕೊಳ್ಳುವುದು ಸೂಕ್ತ. ಪ್ರತಿ ಬಂಧಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಜಿಲ್ಲಾ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ನಂತರ ಸರಕಾರದ ಹಂತಕ್ಕೆ ಬಿಡುಗಡೆಗೆ ಶಿಫಾರಸು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ನ್ಯಾಯಾಧೀಶರಾದ ದೇವರೆಡ್ಡಿ, ಪುರುಷೋತ್ತಮ, ಲಕ್ಷ್ಮೀಕಾಂತಶರ್ಮ, ಅವಿನಾಶರೆಡ್ಡಿ ಮತ್ತು ವಿಶ್ವನಾಥ್, ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಮೊದಲಾದವರಿದ್ದರು.

ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವ ಹಾಗೂ ನೆಮ್ಮದಿಯಿಂದ ಬದುಕು ಸಾಗಿಸುವಂತಾಗಬೇಕು. ದುಷ್ಕೃತ್ಯಗಳನ್ನೆಸಗುವವರನ್ನು ಬಂಧಿಸುವುದು ಅನಿವಾರ್ಯವಾದರೂ ಈ ಚಟುವಟಿಕೆಗಳ ಬಗ್ಗೆ ಬೇಸರವಿದೆ. ಅಂತಹವರು ದುಷ್ಕೃತ್ಯಗಳನ್ನೆಸಗುವ ಮನಸ್ಥಿತಿಯಿಂದ, ಅದರ ವಿಷವರ್ತುಲದಿಂದ ಹೊರಬಂದು ನೆಮ್ಮದಿಯ ಜೀವನ ಕಂಡುಕೊಳ್ಳಬೇಕು.
-ಅಭಿನವ ಖರೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News