ಚಿಕ್ಕಮಗಳೂರು: ಖಾಸಗಿ ವಾಹನಗಳಲ್ಲಿ ಬಾಡಿಗೆ ಆರೋಪ; ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

Update: 2018-10-05 18:23 GMT

ಚಿಕ್ಕಮಗಳೂರು, ಅ.5: ಕೆಲ ಖಾಸಗಿ ವಾಹನಗಳ ಮಾಲಕರು ಬಾಡಿಗೆ ವಾಹನಗಳ ಪರವಾನಿಗೆ ಇಲ್ಲದಿದ್ದರೂ ಸರಕಾರಕ್ಕೆ ತೆರಿಗೆ ವಂಚಿಸಿ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಬಾಡಿಗೆ ಕರೆದಯೊಯ್ಯುತ್ತಿದ್ದಾರೆ. ಇದರಿಂದ ಬಾಡಿಗೆ ವಾಹನಗಳ ಪರವಾನಿಗೆ ಹೊಂದಿದವರಿಗೆ ವಂಚನೆಯಾಗುತ್ತಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕೆಂದು ಕರವೇ  ಯುವಸೇನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆಯ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಮನವಿ ನೀಡಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ತಾಣ. ಇಲ್ಲಿಗೆ ಬರುವವರು ಹಲವು ಪ್ರವಾಸಿಗರನ್ನು ವಂಚಿಸುತ್ತಿರುವ ಕೆಲ ಸ್ವಂತಕ್ಕೆ ಬಳಕೆ ಮಾಡುವ ವಾಹನಗಳ ಮಾಲಕರು ಬಾಡಿಗೆ ವಾಹನಗಳ ಪರವಾನಿಗೆ ಪಡೆಯದೇ ಪ್ರವಾಸಿಗರನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಪರವಾನಿಗೆ ಹೊಂದಿರುವ ಬಾಡಿಗೆ ವಾಹನಗಳ ಮಾಲಕರಿಗೆ ಉದ್ಯೋಗವಿಲ್ಲದಂತಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಆರ್‍ಟಿಒ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲಾಡಳಿತ ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಸತ್ಯವತಿಯವರು ಚಿಕ್ಕಮಗಳೂರು ಹಾಗೂ ಅತ್ತಿಗುಂಡಿಯಲ್ಲಿರುವ ಸ್ವಂತಕ್ಕೆ ಬಳಕೆ ಮಾಡುವ ಲಘು ವಾಹನಗಳನ್ನು ತಮ್ಮ ವಶಕ್ಕೆ ಪಡೆದು ವಾಹನ ಮಾಲಕರಿಗೆ ಕರೆಯಿಸಿ ತಕ್ಷಣ ಬಾಡಿಗೆ ಓಡಿಸುವ ಸಾರಿಗೆ ವಾಹನವಾಗಿ ಪರಿವರ್ತಿಸಿದ್ದರು. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ ತೆರಿಗೆ ಬರುವಂತಾಗಿತ್ತು. ಅವರ ವರ್ಗಾವಣೆಯಾಗಿದ್ದರಿಂದ ಈಗ ಮತ್ತೆ ಸ್ವಂತಕ್ಕೆ ಬಳಕೆ ಮಾಡುವ ಲಘು ವಾಹನಗಳನ್ನು ರಾಜಾರೋಷವಾಗಿ ಬಾಡಿಗೆಗೆ ಓಡಿಸಲಾಗುತ್ತಿದೆ. ಈ ವೇಳೆ ಅಪಘಾತಗಳಾದರೆ ಯಾರು ಹೊಣೆ, ಸರಕಾರಕ್ಕೆ ತೆರಿಗೆಯಲ್ಲಿ ವಂಚನೆ ಮಾಡುತ್ತಿರುವ ವಾಹನ ಮಾಲಕರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಿ ಇವರ ವಾಹನಗಳನ್ನು ಜಪ್ತಿ ಮಾಡಿ ಸಾರಿಗೆ ವಾಹನವಾಗಿ ಪರಿವರ್ತಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹತ್ತಿರ ಇಂತಹ ವಾಹನಗಳ ಮಾಲಕರು ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ಬಹಳ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕರು ಇವರು ಕೇಳುವ ಬಾಡಿಗೆ ನೀಡುವ ತನಕ ಬಿಡುವುದಿಲ್ಲ. ಬೇಲೂರು, ಆಲ್ದೂರು, ಮೂಡಿಗೆರೆ, ಬಾಳೆಹೊನ್ನೂರು, ಕಳಸಾಪುರ, ಸಖರಾಯಪಟ್ಟಣ, ತರೀಕೆರೆ, ಎಲ್ಲಾ ಕಡೆ ಇವರ ಹಾವಳಿ ಜಾಸ್ತಿಯಾಗಿದ್ದು, ಸಂಬಂದಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತಕ್ರಮ ಕೈಗೊಳ್ಳಬೇಕು. ನಗರದಲ್ಲಿ ಶಾಲಾ ಮಕ್ಕಳನ್ನು ಸ್ವಂತಕ್ಕೆ ಬಳಕೆ ಮಾಡುವ ವಾಹನದಲ್ಲಿಯೇ ಹೆಚ್ಚಿನ ಮಕ್ಕಳನ್ನು ವಾಹನದಲ್ಲಿ ಸಾಗಿಸುತ್ತಿದ್ದಾರೆ. ಕೆಲವು ವಾಹನಗಳಲ್ಲಿ ಗ್ಯಾಸ್‍ಗಳನ್ನು ಅಳವಡಿಸಿ ಬಾಡಿಗೆ ಓಡಿಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಂಗನಾಥ್, ಕುಮಾರ್, ಪ್ರಕಾಶ್, ರವಿಕುಮಾರ್, ಗುರುಮೂರ್ತಿ, ಕಾರ್ತಿಕ್‍ಪಟೇಲ್, ವಿಜಯ್‍ಕುಮಾರ್, ರಘು, ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News