ಖಾಸಗಿ ಕ್ಷೇತ್ರಗಳಿಗೂ ವಿಸ್ತರಿಸಲಿರುವ ಆಧಾರ್

Update: 2018-10-06 03:40 GMT

ಇತ್ತೀಚೆಗೆ ಲೈಂಗಿಕ ಹಕ್ಕು, ಶಬರಿಮಲೆ, ಗೇ ಸಂಬಂಧಗಳ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ತನ್ನ ಮಹತ್ವದ ತೀರ್ಪನ್ನು ನೀಡಿದೆಯಾದರೂ ಅದು ಹತ್ತು ಹಲವು ಪ್ರಶ್ನೆಗಳ ಮೂಲಕ ಸಮಾಜವನ್ನು ಗೊಂದಲಗೊಳಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಆ ಸಾಲಿಗೆ ನಾವು ಆಧಾರ್ ಕುರಿತ ತೀರ್ಪನ್ನು ತೆಗೆದುಕೊಳ್ಳಬಹುದು. ಸುಪ್ರೀಂಕೋರ್ಟ್ ಕೆಲವು ಕ್ಷೇತ್ರಗಳಿಗೆ ಆಧಾರ್ ಅಗತ್ಯವಿಲ್ಲ ಎಂದು ಹೇಳಿದಾಕ್ಷಣ, ಜನಸಾಮಾನ್ಯರು ಆಧಾರ್ ಹೊಂದುವುದರಿಂದ ಮುಕ್ತರಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಆಧಾರ್ ಇಲ್ಲದೆ ಈ ದೇಶದಲ್ಲಿ ಬಾಳುತ್ತೇನೆ ಎಂದು ಹೊರಟವನಿಗೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇದೇ ಸಂದರ್ಭದಲ್ಲಿ ಖಾಸಗಿ ಕಂಪೆನಿಗಳಿಗೆ ಆಧಾರ್ ಬಳಕೆಗೆ ನಿಷೇಧವನ್ನು ಹೇರಿದೆ. ಇದು ಕೂಡ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದರ ಕುರಿತಂತೆ ಅನುಮಾನಗಳಿವೆ. ಇದು ಸೃಷ್ಟಿಸುವ ಬಿಕ್ಕಟ್ಟುಗಳನ್ನು ಖಾಸಗಿ ವಲಯ ಯಶಸ್ವಿಯಾಗಿ ನಿಭಾಯಿಸುತ್ತದೆಯೇ ಎನ್ನುವುದು ಪ್ರಶ್ನೆ

ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ನೀತಿ ಆಯೋಗ ಇಕ್ಕಟ್ಟಿಗೆ ಸಿಲುಕಿದೆ. ಖಾಸಗಿ ಸಂಸ್ಥೆಗಳಿಗೆ ಆಧಾರ್‌ನ್ನು ವೈಯಕ್ತಿಕ ಮಾಹಿತಿಯ ಆಧಾರವಾಗಿ ಬಳಸಿಕೊಳ್ಳಲು ಹಾದಿ ಕಲ್ಪಿಸಿಕೊಡುವುದಕ್ಕಾಗಿ ಆಧಾರ್ ಯೋಜನೆಯನ್ನು ನಿರ್ವಹಿಸುತ್ತಿರುವ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು, ಹೊಸ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದಕ್ಕೆ ಮುಂದಾಗಿತ್ತು. ಇದೀಗ ಖಾಸಗಿ ವಲಯಕ್ಕೆ ಆಧಾರ್ ಬಳಕೆಗೆ ಅವಕಾಶ ನೀಡುವಂತೆ ನೂತನ ವಿಧೇಯಕವೊಂದನ್ನು ಸಂಸತ್‌ನಲ್ಲಿ ಮಂಡಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಭಾರತದ ಕೈಗಾರಿಕಾ ಹಾಗೂ ಮೊಬೈಲ್ ಸಂಸ್ಥೆಯು ಕೈಗಾರಿಕಾ ಬಳಗವಾದ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾವು, ಆದೇಶವನ್ನು ಕೈಬಿಡುವಂತೆ ಮಾಡಲು ವಿತ್ತ ಹಾಗೂ ಕಾನೂನು ಸಚಿವರ ಮೇಲೆ ಒತ್ತಡ ಹೇರುತ್ತಿದೆಯೆನ್ನಲಾಗಿದೆ.
  
ಆಧಾರ್‌ನ್ನು ಇತರ ಉದ್ದೇಶಗಳಿಗಾಗಿಯೂ ಬಳಸಿಕೊಳ್ಳಬಹುದೆಂಬ ಅಂಶದ ಬಗ್ಗೆ ನ್ಯಾಯಾಲಯ ಗಮನಸೆಳೆದಿದೆ. ಪಾಸ್‌ಪೋರ್ಟ್, ಪಾನ್‌ಕಾರ್ಡ್, ಚಾಲನಾ ಪರವಾನಿಗೆಯಂತಹ ಇತರ ಗುರುತಿನ ಪುರಾವೆಗಳ ಹಾಗೆ ಆಧಾರ್‌ನ್ನು ಕೂಡಾ ಬಳಸಿಕೊಳ್ಳಬಹುದೆಂದು ಹೇಳಿದೆ. ಹೀಗಾಗಿ, ಯಾರಾದರೂ ಸ್ವಯಂಪ್ರೇರಿತವಾಗಿ ಆಧಾರ್‌ನ್ನು ಗುರುತಿನ ಪುರಾವೆಯಾಗಿ ಬಳಸಿಕೊಂಡಲ್ಲಿ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ನ್ಯಾಯಾಲಯದ ಅಭಿಮತ. ಇದರ ಪರಿಣಾಮವು ಅತ್ಯಂತ ಕುತೂಹಲಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತದೆ. ಓರ್ವ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಆಧಾರ್‌ನ್ನು ಗುರುತಿನ ಪುರಾವೆಯಾಗಿ ಬಳಸಿಕೊಳ್ಳಬಹುದಾಗಿದೆ.ಆದರೆ ಸರಕಾರೇತರ ಸಂಸ್ಥೆಗಳು ಆಧಾರನ್ನು ತಮ್ಮ ಗುರುತಾಗಿ ದೃಢೀಕರಿಸಲು ಅನುಮತಿ ನೀಡುವುದಿಲ್ಲ.

ಆಧಾರ್ ಬಗ್ಗೆ ನೀಡಿದ ತೀರ್ಪಿನಿಂದಾಗಿ ಸುಪ್ರೀಂಕೋರ್ಟ್ , ಏರ್‌ಇಂಡಿಯಾ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಥವಾ ಭಾರತೀಯ ಜೀವವಿಮಾ ನಿಗಮದ ಸರಕಾರಿ ಹಾಗೂ ಸಾರ್ವಜನಿಕರಂಗದ ಸಂಸ್ಥೆಗಳು ಆಧಾರ್‌ನ್ನು ಗುರುತಿಗೆ ಆಧಾರವಾಗಿ ಸ್ವೀಕರಿಸುವುದನ್ನು ಒಪ್ಪಿಕೊಂಡಂತಾಗಿದೆ. ಆದರೆ ಈ ಉದ್ಯಮಸಂಸ್ಥೆಗಳ ಖಾಸಗಿ ಪ್ರತಿಸ್ಪರ್ಧಿಗಳಾದ ವಿಸ್ತಾರ, ರಿಲಯನ್ಸ್ ಜಿಯೋ ಅಥವಾ ಕೊಟಕ್ ಲೈಫ್ ಇನ್ಶೂರೆನ್ಸ್ ನಂತಹ ಸಂಸ್ಥೆಗಳು ಆಧಾರ್ ಗುರುತಿನ ಪುರಾವೆಯಾಗಿ ಬಳಸಿಕೊಳ್ಳುವಂತಿಲ್ಲ್ಲ. ಇದು ಸಾರ್ವಜನಿಕರಂಗದ ಸಂಸ್ಥೆಗಳಿಗೆ ಅನುಕೂಲಕರವಾಗಿದೆ ಹಾಗೂ ಖಾಸಗಿ ಕಂಪೆನಿಗಳ ನಿರ್ವಹಣಾ ವೆಚ್ಚ ಏರಿಕೆಗೆ ಕಾರಣವಾಗಲಿದ್ದು, ಅದರ ಹೊರೆ ಶ್ರೀಸಾಮಾನ್ಯ ಗ್ರಾಹಕನಿಗೆ ರವಾನೆಯಾಗಲಿದೆ.

ಆಧಾರ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಆನಂತರ ವಿವಿಧ ವಲಯಗಳ ಖಾಸಗಿ ಕಂಪೆನಿಗಳು ತಮ್ಮ ಕಾರ್ಯನಿರ್ವಹಣಾ ವೆಚ್ಚದ ಏರಿಕೆಯ ಹಾಗೂ ತಮ್ಮ ಔದ್ಯಮಿಕ ವಿಧಿವಿಧಾನಗಳಲ್ಲಿ ಬದಲಾವಣೆಯನ್ನು ಮಾಡಬೇಕಾದ ಸವಾಲನ್ನು ಎದುರಿಸುತ್ತಿವೆ. ಖಂಡಿತವಾಗಿಯೂ ಖಾಸಗಿ ಕಂಪೆನಿಗಳಿಗೆ ಮಾತ್ರವಲ್ಲದೆ, ಗ್ರಾಹಕರು ಹಾಗೂ ಮಾರುಕಟ್ಟೆಗಳ ಮೇಲೂ ಇದರಿಂದ ಪರಿಣಾಮವುಂಟಾಗಲಿದೆ. ಉದಾಹರಣೆಗೆ ಆಧಾರ್‌ನಿಂದ ಗ್ರಾಹಕನ ಮಾಹಿತಿಯನ್ನು ಪಡೆಯುವ ಮೂಲಕ ದೇಶದ ಪ್ರಖ್ಯಾತ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋನ ಯಶೋಗಾಥೆಯಲ್ಲಿ ದೊಡ್ಡದೊಂದು ಪಾತ್ರವನ್ನು ವಹಿಸಿದೆ. ದೇಶದ ಡಿಜಿಟಲ್ ಪಾವತಿ ಉದ್ಯಮಸಂಸ್ಥೆಗಳಿಗೂ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆಯು ಅವುಗಳ ಕಾರ್ಯನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸುವಲ್ಲಿ ನೆರವಾಗಿದೆ. ಈ ಹಿನ್ನೆಲೆಯಲ್ಲಿಯೇ ಖಾಸಗಿ ವಲಯಗಳು ಈ ಕುರಿತಂತೆ ಕಾನೂನೊಂದನ್ನು ಜಾರಿಗೊಳಿಸಲು ಒತ್ತಾಯಿಸುತ್ತಿದೆ. ಹಾಗೆಯೇ ಅದಕ್ಕೆ ಪೂರಕವಾದ ಅಭಿಪ್ರಾಯಗಳನ್ನು ರೂಪಿಸಲು ಹೆಣಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಜೇಟ್ಲಿಯವರು ವಿಧೇಯಕವೊಂದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಆದರೆ ಖಾಸಗಿ ವಲಯಕ್ಕೆ ಪೂರಕವಾಗಿ ಮಸೂದೆ ಜಾರಿಗೊಳಿಸುವಾಗ ವಿರೋಧಪಕ್ಷಗಳು ತಕರಾರು ತೆಗೆಯುವ ಎಲ್ಲ ಸಾಧ್ಯತೆಗಳಿವೆ. ಸೆಕ್ಷನ್ 57ರ ಕೆಲವು ಭಾಗವು ಅಸಾಂವಿಧಾನಿಕವೆಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಆದೇಶದಲ್ಲಿ ತಿಳಿಸಿದ್ದಾರೆ.

ಈ ಸೆಕ್ಷನ್, ಕಾರ್ಪೊರೇಟ್ ಸಂಸ್ಥೆ ಅಥವಾ ವ್ಯಕ್ತಿಗೆ, ಇತರ ಯಾವುದೇ ವ್ಯಕ್ತಿಯ ಗುರುತನ್ನು ದೃಢೀಕರಿಸುವುದಕ್ಕೆ ಅವಕಾಶ ನೀಡುತ್ತದೆ. ಇದು ವ್ಯಕ್ತಿಯ ಮೂಲಭೂತ ಹಕ್ಕುಗಳ ಮೇಲೆ ನಡೆಸುವ ಅಸಾಂವಿಧಾನಿಕವಾದ ಹಸ್ತಕ್ಷೇಪವೆಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಿರುವಾಗ ಆದೇಶದ ವಿರುದ್ಧ ಮಸೂದೆ ಜಾರಿಗೊಳಿಸಿದರೆ ಅದು ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಬಿತ್ತಬಹುದು ಅಥವಾ ವಿರೋಧ ಪಕ್ಷಗಳು ಇದನ್ನು ಬಿಜೆಪಿಯ ಕಾರ್ಪೊರೇಟ್ ಪ್ರೀತಿಯ ಸಂಕೇತವೆಂದು ಬಿಂಬಿಸಬಹುದು. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ವಲಯದ ಮೂಲಕವೇ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿ, ಬಳಿಕ ಸರಕಾರ ಎಲ್ಲರ ಸಹಮತದೊಂದಿಗೆ ಮಸೂದೆ ಜಾರಿಗೊಳಿಸುವ ಸಾಧ್ಯತೆಗಳು ಕಾಣುತ್ತವೆ. ಅಂದರೆ ಸ್ವಯಂ ಪ್ರೇರಿತರಾಗಿ ಆಧಾರ್ ಮೂಲಕ ಗುರುತನ್ನು ದೃಢ ಪಡಿಸುವ ಹಕ್ಕನ್ನು ನಾಗರಿಕರಿಗೆ ನೀಡುವ ಹೆಸರಲ್ಲಿ ಮತ್ತೆ ಆಧಾರ್‌ನ್ನು ಖಾಸಗಿ ಸಂಸ್ಥೆಗಳಿಗೆ ಬಳಸುವುದಕ್ಕೆ ಸರಕಾರ ಮಸೂದೆಯ ಮೂಲಕ ಅವಕಾಶ ಮಾಡಿಕೊಡಲು ಮುಂದಾಗಿದೆ. ಸ್ವಯಂಪ್ರೇರಿತ ಎನ್ನುವುದು ಹೆಸರಿಗಷ್ಟೇ ಇರುತ್ತದೆ. ಈ ಮಸೂದೆಯ ಮರೆಯಲ್ಲಿ ಖಾಸಗಿ ಸಂಸ್ಥೆಗಳು ಹಂತಹಂತವಾಗಿ ಗ್ರಾಹಕರ ಮೇಲೆ ಈ ಆಧಾರ್‌ನ್ನು ಹೇರುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಬೇಕಾಗಿರುವ ತಯಾರಿಗಳು ಭರ್ಜರಿ ಯಾಗಿಯೇ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News