ಮೈತ್ರಿಯಲ್ಲೆ ಉಪಚುನಾವಣೆ ಎದುರಿಸುತ್ತೇವೆ: ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು, ಅ. 6: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ನಮ್ಮದೆ ಕ್ಷೇತ್ರವಾಗಿತ್ತು. ಅಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಲಿದೆ. ಬಾಗಲಕೋಟೆ ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲಿದೆ ಎಂದು ಹೇಳಿದರು.
ಶಿವಮೊಗ್ಗ, ಬಳ್ಳಾರಿ, ಮಂಡ್ಯ ಸೇರಿ ಮೂರು ಲೋಕಸಭಾ ಉಪ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಉಭಯ ಪಕ್ಷಗಳು ಮೈತ್ರಿಯಾಗಿ ಚುನಾವಣೆ ಎದುರಿಸಲಿದ್ದೇವೆ ಎಂದರು. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಅಭ್ಯರ್ಥಿ ಯಾರು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಈ ಉಪ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ಯಾವುದೇ ಕಾರಣಕ್ಕೂ ದಿಕ್ಸೂಚಿ ಅಲ್ಲ ಎಂದು ಅವರು ಹೇಳಿದರು.
ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವನ್ನು ಮಾಡಿಲ್ಲ. ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳಲಿದ್ದಾರೆ ಎಂದ ಅವರು, ವಿಜಯಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಾವು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ದೇವೆ ಎಂದರು.