ಹನೂರು: ಆದಿವಾಸಿ ಪೋಡಿನ ನಿವಾಸಿಗಳಿಗೆ ಪ್ರತಿಜ್ಞಾವಿಧಿ ಬೋಧನೆ
ಹನೂರು,ಅ.6: ಒಂದು ಕುಟುಂಬ, ಒಂದು ಗ್ರಾಮ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದಲ್ಲಿ ಶಿಕ್ಷಣ ಬಹುಮುಖ್ಯ. ಪ್ರತಿಯೊಬ್ಬರ ಸಮಸ್ಯೆಗಳಿಗೆ ಶಿಕ್ಷಣವೊಂದೇ ರಾಮಬಾಣ. ಆದುದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದಿವಾಸಿ ಪೋಡಿನ ವಾಸಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.
ಕ್ಷೇತ್ರ ವ್ಯಾಪ್ತಿಯ ಅರಣ್ಯದೊಳಗಿನ ಆದಿವಾಸಿ ಪೋಡು ನೆಲ್ಲಿಕತ್ರಿಪೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಪಟ್ಟಣ ಪ್ರದೇಶ ವಾಸಿಗಳು ಮತ್ತು ಗ್ರಾಮ ಪಂ. ಕೇಂದ್ರಸ್ಥಾನಗಳ ಆಸುಪಾಸಿನ ಗ್ರಾಮಗಳಿಗೆ ದೊರಕುವಷ್ಟು ಶೀಘ್ರವಾಗಿ ಅರಣ್ಯದಂಚು ಮತ್ತು ಅರಣ್ಯದೊಳಗಿನ ಗ್ರಾಮವಾಸಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಗಮನ ಸೆಳೆಯಲು, ಅವುಗಳನ್ನು ಅವರಿಗೆ ತಿಳಿಸಲು ಯಾರಾದರೊಬ್ಬರು ಸುಶಿಕ್ಷಿತರಾಗಿರಬೇಕು. ಸರ್ಕಾರ 100ಕೋಟಿ ಅನುದಾನ ನೀಡಿದರೂ ಸಹ ನಿಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು.
ಸಮಸ್ಯೆಗಳ ದರ್ಶನ: ನೆಲ್ಲಿಕತ್ರಿಪೋಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮೊದಲಿಗೆ ಆದಿವಾಸಿಗಳ ವಾಸದ ಮನೆಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಕೃಷಿ ಭೂಮಿಯತ್ತ ಧಾವಿಸಿ ಪರಿಶೀಲನೆ ನಡೆಸಿದಾಗ ಹಲವಾರು ಜನ ಜಮೀನನ್ನು ಉಳುಮೆ ಮಾಡದೇ ಇರುವುದೇ ಕಂಡುಬಂದಿತು. ಈ ಬಗ್ಗೆ ಗ್ರಾಮಸ್ಥರನ್ನು ಪ್ರಶ್ನಿಸಿದಾಗ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ತಿಳಿಸಿ, ಸೂಕ್ತ ಪರಿಹಾರಕ್ಕೆ ಮನವಿ ಮಾಡಿದರು.
ಈ ಸಂದರ್ಭ ಇಒ ಉಮೇಶ್, ಪ್ರಭಾರ ತಹಶಿಲ್ದಾರ್ ಶಿವರಾಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿ ಕೃಷ್ಣಪ್ಪ, ಪಿಡಿಓ ಮರಿಸ್ವಾಮಿ, ಗ್ರಾ.ಪಂ ಉಪಾಧ್ಯಕ್ಷ ಸಿದ್ದರಾಜು, ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಎಎಸ್‍ಐ ಅರಸು ಗ್ರಾಮಸ್ಥರು ಹಾಜರಿದ್ದರು.