ಹನೂರು: ವನ್ಯಜೀವಿ ಸಪ್ತಾಹ ಕಾರ್ಯಕ್ರಮ
ಹನೂರು,ಅ.6: ಕಾಡಂಚಿನ ಗ್ರಾಮಗಳ ಜನರು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅರಿತು ಅದರ ಉಳಿವಿಗಾಗಿ ಶ್ರಮಿಸಬೇಕು, ಇದರಲ್ಲಿ ವಿದ್ಯಾರ್ಥಿಗಳು ಪಾತ್ರ ಮಹತ್ವವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ಆಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಿಆರ್.ಟಿ ಹುಲಿ ಸಂರಕ್ಷಿತ ವಲಯ ಮತ್ತು ವನ್ಯಜೀವಿ ವಲಯ ಬೈಲೂರು ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಫರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಅರಣ್ಯ ಕಾಯಿದೆಯನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಅರಣ್ಯ ಮತ್ತು ವನ್ಯಪ್ರಾಣಿಗಳನ್ನು ಸಂರಕ್ಷಣೆ ಮಾಡುವುದನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ಅರಣ್ಯ ರಕ್ಷಣೆ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ 7 ದಿನಗಳ ಕಾಲ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದೆ . ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ವಲಯ ಉಪಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿ, ಅರಣ್ಯ ಮತ್ತು ವನ್ಯ ಸಂರಕ್ಷಣೆಯ ಬಗ್ಗೆ ಹನೂರು ಶೈಕ್ಷಣಿಕ ವಲಯದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲಾ, ಪ್ರಬಂಧಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳನ್ನು ವಿಭಾಗೀಯ ಮಟ್ಟಕ್ಕೆ ಆಯ್ಕೆಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಬಿ.ಎಂ ಮಹದೇವ್, ಅರಣ್ಯ ರಕ್ಷಕ ವಿಶ್ವನಾಥ್, ಲೋಕೇಶ್, ಮುಖ್ಯ ಶಿಕ್ಷಕ ಮಂಜುನಾಥ್, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.