ಬಲಿಗಾಗಿ ಕಾಯುತ್ತಿದೆ ಚಿಕ್ಕಮಗಳೂರು-ಕಡೂರು ಹೆದ್ದಾರಿಯ ಬಳಿಯ ತಡೆಗೋಡೆಯಿಲ್ಲದ ಕೆರೆ

Update: 2018-10-06 17:23 GMT

ಚಿಕ್ಕಮಗಳೂರು,ಅ.6: ಇಲ್ಲಿನ ನಗರಕ್ಕೆ ಹೊಂದಿ ಕೊಂಡಿರುವ ಕೆರೆಯೊಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೂಳು, ನಗರದ ತ್ಯಾಜ್ಯ ತುಂಬಿಕೊಂಡು ಗಬ್ಬು ನಾರುತ್ತಿರುವುದು ಒಂದೆಡೆಯಾದರೆ, ಈ ಕೆರೆ ದಂಡೆಯ ಮೇಲೆ ಹಾದು ಹೋಗಿರುವ ಚಿಕ್ಕಮಗಳೂರು-ಕಡೂರು ಸಂಪರ್ಕದ ರಾ.ಹೆದ್ದಾರಿಯಲ್ಲಿ ಕೆರೆ ವ್ಯಾಪ್ತಿಯ ರಸ್ತೆಗೆ ಎರಡೂ ಬದಿಗಳಲ್ಲಿ ತಡೆಗೋಡೆಗಳಿರುವುದರಿಂದ ಪ್ರತಿನಿತ್ಯ ವಾಹನ ಅಪಘಾತಗಳು ಸಂಭವಿಸುತ್ತಿವೆಯಾದರೂ ಕೆರೆ ದಂಡೆಗೆ ತಡೆಗೋಡೆ ನಿರ್ಮಾಣಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗದಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರದ ಬಸವನಹಳ್ಳಿ ಬಡಾವಣೆಗೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆ ನಗರದ ಸೌಂದರ್ಯಕ್ಕೆ ಕಳಸಪ್ರಾಯದಂತಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಕೆರೆಗೆ ನಗರದ ತ್ಯಾಜ್ಯವಸ್ತುಗಳನ್ನು ಸುರಿಯುತ್ತಿರುವುದು ಹಾಗೂ ಚರಂಡಿಗಳಲ್ಲಿನ ತ್ಯಾಜ್ಯ ನೀರು ಸೇರಿ ಇಡೀ ಕೆರೆ ವ್ಯಾಪ್ತಿಯಲ್ಲಿನ ರಸ್ತೆ ಮೇಲೆ ನಾಗರಿಕರು ಹಾಗೂ ವಾಹನ ಚಾಲಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ಬಸವನಹಳ್ಳಿಕೆರೆ ವ್ಯಾಪ್ತಿಯಲ್ಲಿ ದಂಟರಮಕ್ಕಿಯಿಂದ ಹನುಮಂತಪ್ಪ ಸರ್ಕಲ್‌ನಲ್ಲಿರುವ ಪೆಟ್ರೋಲ್ ಬಂಕ್ ವರೆಗಿನ ದ್ವಿಮುಖ ರಸ್ತೆ ಕೆರೆ ದಂಡೆಯ ಮೇಲಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ತಡೆಗೋಡೆಗಳಿಲ್ಲದಿರುವುದು ನಾಗರಿಕರು ಹಾಗೂ ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು-ಕಡೂರು ಸಂಪರ್ಕದ ರಾ.ಹೆದ್ದಾರಿಯಲ್ಲಿರುವ ಬಸವನಹಳ್ಳಿ ಕೆರೆ ದಂಡೆ ಮೇಲೆ ಹಾದು ಹೋಗಿರುವ ರಸ್ತೆ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಕೆರೆ ದಂಡೆ ಮೇಲಿನ ಹೆದ್ದಾರಿಯ ಒಂದು ಬದಿಯಲ್ಲಿ ಕೆರೆ ಇದ್ದರೆ ಮತ್ತೊಂದು ಬದಿಯಲ್ಲಿ 30-40 ಅಡಿ ಆಳದ ಹೊಂಡವಿದೆ. ವಿಪರ್ಯಾಸವೆಂದರೆ ಈ ರಸ್ತೆ ನಿರ್ಮಾಣವಾದಾಗಿನಿಂದಲೂ ಕೆರೆ ದಂಡೆಗೆ ವಾಹನ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದುವರೆಗೂ ಕ್ರಮವಹಿಸಿಲ್ಲ. ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ವಾರಕ್ಕೊಂದರಂತೆ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಕೆರೆ ದಂಡೆ ಮೇಲೆ ಸಾಗುತ್ತಿದ್ದ ಆಟೊ ರಿಕ್ಷಾ ಹಾಗೂ ಕಾರೊಂದು ಚಾಲಕರ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಕೆರೆಯಲ್ಲಿ ನೀರಿನಮಟ್ಟ ಕಡಿಮೆ ಇದ್ದ ಪರಿಣಾಮ ಈ ವಾಹನಗಳಲ್ಲಿದ್ದವರು ಗಂಭೀರಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಅಪಘಾತಗಳು ಕೆರೆ ದಂಡೆ ವ್ಯಾಪ್ತಿಯಲ್ಲಿ ಸಾಮಾನ್ಯ ಎಂಬಂತಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ವಾಹನಗಳು ಕೆರೆ ಅಥವಾ ಹೊಂಡಕ್ಕೆ ಉರುಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕಮವಾಗಿ ತಡೆಗೋಡೆಗಳನ್ನು ನಿರ್ಮಿಸಲು ಇದುವರೆಗೂ ಕ್ರಮವಹಿಸಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

ಸುಂದರ ಕೆರೆ ಪರಿಸರ ಸಂರಕ್ಷಣೆಗೂ ನಿರ್ಲಕ್ಷ: ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ ಬೆಟ್ಟ ಶ್ರೇಣಿಗಳ ಹಿನ್ನೆಲೆಯಲ್ಲಿರುವ ಚಿಕ್ಕಮಗಳೂರು ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಈ ಬಾರಿಯ ಮಳೆಯಿಂದಾಗಿ ಕೆರೆಯ ಅರ್ಧ ತುಂಬಿರುವುದರಿಂದ ಕೆರೆ ಪರಿಸರದ ಮತ್ತಷ್ಟು ರಂಗು ಪಡೆದಿದೆ. ಆದರೆ ದೂರದ ಬೆಟ್ಟ ನುಣ್ಣಗೆ ಎಂಬಂತೆ ಕೆರೆಯನ್ನು ಹತ್ತಿರದಿಂದ ಗಮನಿಸಿದರೆ ಇಡೀ ನಗರದ ತ್ಯಾಜ್ಯ ರಾಶಿ ತುಂಬಿಕೊಂಡಿರುವ ಕೆರೆ ಗಬ್ಬುನಾರುತ್ತಿದೆ. ಹೂಳು, ಗಿಡಗಂಟಿಗಳ ಜಡ್ಡು ಕೆರೆಯ ಸುಂದರ ಪರಿಸರ ಪರಿಸರಕ್ಕೆ ಕಪ್ಪುಚುಕ್ಕಿಯಂತಾಗಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವ ಈ ಕೆರೆಯ ಅಭಿವೃದ್ಧಿಗಾಗಿ ಹಾಗೂ ರಾಜ್ಯ, ಕೇಂದ್ರ ಸರಕಾರಗಳಿಂದ ಸಾಕಷ್ಟು ಅನುದಾನ ತಂದು ಸುರಿಯಲಾಗಿದೆ. ಆದರೆ ಕೆರೆಯ ಪರಿಸರ ಸಂರಕ್ಷಣೆಗೆ ಮಾತ್ರ ಈ ಅನುದಾನ ಬಳಕೆಯಾಗಿರುವ ಬಗ್ಗೆ ಯಾವುದೇ ಕುರುಹು ಕಂಡು ಬರುತ್ತಿಲ್ಲ ಎಂದು ಸಂಘ ಸಂಸ್ಥೆಗಳ ಮುಖಂಡರು ದೂರುತ್ತಿದ್ದಾರೆ. ದಂಟರಮಕ್ಕಿ ಬಡಾವಣೆ ವ್ಯಾಪ್ತಿಯಲ್ಲಿನ ಕೆರೆ ದಂಡೆಯಲ್ಲಿ ರಸ್ತೆ ಕಾಮಗಾರಿ ನಡೆದಿರುವುದನ್ನು ಹೊರತು ಪಡಿಸಿದರೆ ಮತ್ಯಾವ ಅಭಿವೃದ್ಧಿಯೂ ಕಣ್ಣಿಗೆ ಕಾಣುತ್ತಿಲ್ಲ. ಇನ್ನಾದರೂ ಬಸವನಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಹಾಗೂ ಕೆರೆ ಪರಿಸರದ ಸೌಂದರ್ಯ ಕಾಪಾಡಿ ಕೆರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಅಧಿಕಾರಿಗಳು, ಜನಪ್ರತಿನಿಧಿಗಳ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಸಿ.ಟಿ.ರವಿ ಅವರ ಮನೆ ಬಸವನಹಳ್ಳಿ ಬಡಾವಣೆಯಲ್ಲಿದ್ದು, ಕೆರೆ ಏರಿಯ ಮೇಲಿನ ದ್ವಿಮುಖ ರಸ್ತೆಯಲ್ಲಿ ತಡೆಗೋಡೆಗಳಿಲ್ಲದೇ ಆಗಾಗ್ಗೆ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಅವರಿಗೆ ತಿಳಿದಿದ್ದರೂ ತಡೆಗೋಡೆಗಳ ನಿರ್ಮಾಣಕ್ಕೆ ಕ್ರಮವಹಿಸದಿರುವುದನ್ನು ಗಮನಿಸಿದರೆ ಅವರಿಗೆ ನಾಗರಿಕರ, ವಾಹನ ಚಾಲಕರ ಜೀವದ ಬಗ್ಗೆ ಕಾಳಜಿ ಇಲ್ಲ ಎಂಬಂತಾಗಿದೆ.

-ಬಸವರಾಜ್, ಲಾರಿ ಮಾಲಕರ ಸಂಘದ ಸದಸ್ಯ

ಬಸವನಹಳ್ಳಿ ಕೆರೆಯ ಸ್ವಚ್ಛತೆ ಮರೀಚಿಕೆಯಾಗಿದೆ. ಕ್ಷೇತ್ರದ ಶಾಸಕರು ಬಿಜೆಪಿ ಪಕ್ಷದವರೇ, ಜಿಪಂ, ನಗರಡಸಭೆ ಆಡಳಿತ ಬಿಜೆಪಿ ಕೈನಲ್ಲೇ ಇದೆ. ಸ್ವಚ್ಛ ಭಾರತದ ಹೆಸರಿನಲ್ಲಿ ಪ್ರತಿದಿನ ಪೊರಕೆ ಹಿಡಿದು ರಸ್ತೆ ಗುಡಿಸಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಕೆರೆಗಳ ಸಂರಕ್ಷಣೆಗೆ ಮುಂದಾಗದಿರುವುದು ವಿಪರ್ಯಾಸ. ಕೆರೆ ಅಭಿವೃದ್ಧಿ ಹೆಸರಿನಡಿಯಲ್ಲಿ ಬಂದ ಅನುದಾನದ ಸರಿಯಾದ ಬಳಕೆಯಾಗಿಲ್ಲ. ಈ ಕೆರೆ ಸಂರಕ್ಷಣೆ, ಅಭಿವೃದ್ಧಿಯಿಂದ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಲಿದೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಕೆರೆ ಗಬ್ಬುನಾರುತ್ತಿದೆ. ಇಂತಹ ಕೆರೆ ಮಧ್ಯೆ ವಿವೇಕಾನಂದ ಮೂರ್ತಿ ಪ್ರತಿಷ್ಠಾಪಿಸಿ, ಅವರ ಮುಖ ವಿರೂಪಗೊಳಿಸಿರುವುದು ಮಹಾನ್ ಸಂತನಿಗೆ ಮಾಡಿದ ಅಪಮಾನವಾಗಿದೆ.
-ಮಂಜುನಾಥ್, ಸಾಮಾಜಿಕ ಕಾರ್ಯಕರ್ತ, ಕೂದುವಳ್ಳಿ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News