ಯಾವುದು ನಿಜವಾದ ದಸರಾ ಆಚರಣೆ ಅನ್ನುವುದು ಸದ್ಯಕ್ಕೆ ಅಪ್ರಸ್ತುತ: ಯದುವೀರ್

Update: 2018-10-06 17:54 GMT

ಮೈಸೂರು,ಅ.6: ಯಾವುದು ನಿಜವಾದ ದಸರಾ ಆಚರಣೆ ಅನ್ನೋದು ಸದ್ಯಕ್ಕೆ ಅಪ್ರಸ್ತುತ ಎನ್ನುವ ಮೂಲಕ ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್  ಒಡೆಯರ್ ಅವರು ಶಾಸಕ ಎಚ್.ವಿಶ್ವನಾಥ್ ಹೇಳಿಕೆಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶನಿವಾರ ಆಗಮಿಸಿದ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ, ಧಾರ್ಮಿಕವಾಗಿ ವಿಧಿ ವಿಧಾನಗಳ ಮೂಲಕ ದಸರಾ ನಡೆಯುತ್ತದೆ. ಸರ್ಕಾರ ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿ ದಸರಾ ಆಚರಿಸುತ್ತದೆ. ಸರ್ಕಾರದ್ದು ಸೆಕ್ಯೂಲರ್ ದಸರಾ ಎಂದರು.

ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಬರುವ ಪ್ರವಾಸಿಗರಿಗೆ ಶುಭಾಶಯ ಕೋರಿದರಲ್ಲದೇ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು. ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿದೆಯಲ್ಲದೇ ಸ್ವಚ್ಛನಗರ ಪಟ್ಟ ಗಳಿಸಿದೆ. ನಾಡಿನ ಕಲೆ ಸಂಸ್ಕೃತಿ ಅನಾವರಣಗೊಳ್ಳುವ ದಸರಾಗೆ ಬನ್ನಿ ಎಂದು ಪ್ರವಾಸಿಗರಿಗೆ ದಸರಾಗೆ ಸ್ವಾಗತ ಕೋರಿದರು. ಅರಮನೆಯಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿವೆ. ದಸರಾ ಆಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ ಈ ಕುರಿತು ಜಾಸ್ತಿ ಏನೂ ಹೇಳಕೋಗಲ್ಲ. ಹೇಳಿದರೆ ತಪ್ಪಾಗತ್ತೆ. ಇದು ದಸರಾ ಸಮಯವಾದ್ದರಿಂದ ಇಡೀ ಜಗತ್ತೇ ಮೈಸೂರಿನತ್ತ ನೋಡಲಿದೆ. ಈ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಪೌರಕಾರ್ಮಿಕರ ಸಮಸ್ಯೆ ಬಗೆಹರಿಸೋದು ಸರ್ಕಾರದ ಹೊಣೆ. ಪೌರಕಾರ್ಮಿಕರ ಸಮಸ್ಯೆ ಆದಷ್ಟು ಬೇಗ ಬಗೆಹರಿಸಿ ನಗರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News