ಗಿರಿಜನ ಕಟುಂಬಗಳಿಗೆ ಅಗತ್ಯ ಮೂಲಭೂತ ಸೌಕರ್ಯ ನೀಡಲು ಕೊಡಗು ಜಿಲ್ಲಾಧಿಕಾರಿ ಸೂಚನೆ

Update: 2018-10-06 18:14 GMT

ಮಡಿಕೇರಿ, ಅ.6 : ಸೋಮವಾರಪೇಟೆ ತಾಲ್ಲೂಕಿನ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಗಿರಿಜನ ಕಟುಂಬಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಆದಷ್ಟು ಶೀಘ್ರ ಕಲ್ಪಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸವಿರುವ ಗಿರಿಜನರ ಕಟುಂಬಗಳಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಕರ್ಯ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಸವನಹಳ್ಳಿಯ 136 ಮತ್ತು ಬ್ಯಾಡಗೊಟ್ಟದ 152 ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಅವುಗಳನ್ನು ಒಂದು ತಿಂಗಳಲ್ಲಿ ಮುಕ್ತಾಯಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.       

ಬಸವನಹಳ್ಳಿ ಪುನರ್ವಸತಿ ಕೇಂದ್ರದಲ್ಲಿನ ತಾತ್ಕಾಲಿಕ ಶೆಡ್‍ಗಳಲ್ಲಿ ವಾಸವಿರುವ ಕುಟುಂಬಗಳನ್ನು ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸಿ ಉಳಿದಿರುವ ಮನೆಗಳ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಕುಟುಂಬಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸ್ವ ಉದ್ಯೋಗ ಪಡೆಯುವಂತಾಗಲು ಅಲ್ಲಿ ವಾಸಿಸುವ ಕುಟುಂಬ ಸದಸ್ಯರ ಹೆಸರು ನೋಂದಾಯಿಸಿ ನರೇಗಾ ಯೋಜನೆ ಮುಖಾಂತರ ಅವರಿಗೆ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.       
ಗಿರಿಜನ ಅಭಿವೃದ್ದಿ ಯೋಜನೆ ಇಲಾಖೆ ಮುಖಾಂತರ ಜಿಲ್ಲೆಯಲ್ಲಿ 02 ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಸರಿಯಾಗಿ ಆರೋಗ್ಯ ಸೇವೆ ಒದಗಿಸದಿದ್ದರೆ ಅವುಗಳನ್ನು ಬದಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಅಧಿಕಾರಿಗಳಿಗೆ ಸಲಹೆ ಮಾಡಿದರು. 

ವಾರದಲ್ಲಿ ಒಂದು ದಿನ ಗಿರಿಜನರ ಹಾಡಿಗಳಲ್ಲಿ ಮತ್ತು ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಿಗೆ ವೈದ್ಯರು ಭೇಟಿ ನೀಡಿ ಚಿಕಿತ್ಸೆ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪುನರ್ವಸತಿ ಕೇಂದ್ರಗಳ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಅವರು ಹಲವು ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಎಸ್.ಸದಾಶಿವಯ್ಯ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News