ಕಳಸ: ಹಳ್ಳ ದಾಟಲು ಕಾಲುಸಂಕದಲ್ಲಿ ಸರ್ಕಸ್ ಮಾಡುವ ದಲಿತ ಕಾಲನಿ ನಿವಾಸಿಗಳು

Update: 2018-10-07 13:21 GMT

►ಮಳೆಗಾಲದಲ್ಲಿ ತುಂಬಿ ಹರಿಯವ ಭದ್ರಾನದಿಯ ಉಪನದಿ
►ಕಾಮಗಾರಿ ಪೂರ್ಣಕ್ಕೆ ದಲಿತರ ಒತ್ತಾಯ

ಚಿಕ್ಕಮಗಳೂರು, ಅ.7: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತು ಜಿಲ್ಲೆಯ ಕಳಸ ಪಟ್ಟಣ ಸಮೀಪದಲ್ಲಿರುವ ಹಡ್ಲುಮನೆ ದಲಿತ ಕಾಲನಿ ಜನರ ಪಾಲಿಗೆ ಅಕ್ಷರಶಃ ನಿಜ ಎಂಬಂತಾಗಿದ್ದು, ದಲಿತರ ಮನೆಗಳ ಸಂಪರ್ಕಕ್ಕಾಗಿ ಸಮೀಪದಲ್ಲಿ ಹರಿಯುವ ಭದ್ರಾನದಿಯ ಉಪನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಮೀಸಲಿಟ್ಟ ಅನುದಾನದಲ್ಲಿ ಅರ್ಧಂಬರ್ದ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರು, ಗ್ರಾಪಂ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ನಿವಾಸಿಗಳು ಆರೋಪಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಗ್ರಾಪಂ ವ್ಯಾಪ್ತಿಯಲ್ಲಿರುವ ಹಡ್ಲುಮನೆ ಕಳಸ ಪಟ್ಟಣದಿಂದ ಕೂಗಳತೆಯ ದೂರದಲ್ಲಿದೆ. ಇಲ್ಲಿ ದಲಿತರ ಸುಮಾರು 8ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ನಿವಾಸಿಗಳ ಪೈಕಿ ಕೆಲವರು ಭತ್ತದ ಕೃಷಿಕರಾಗಿದ್ದು, ಕೆಲವರು ಕೂಲಿ ಕಾರ್ಮಿಕರಾಗಿದ್ದಾರೆ. ನಿವಾಸಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಳಸ ಪಟ್ಟಣಕ್ಕೆ ಬರಲು ಹಾಗೂ ಹೊಲಗದ್ದೆಗಳಿಗೆ ತೆರಳಲು ನಿವಾಸಿಗಳ ಮನೆಗಳ ಸಮೀಪದಲ್ಲಿ ಹರಿಯುವ ಭದ್ರಾ ನದಿಯ ಉಪನದಿಯೊಂದನ್ನು ದಾಟಬೇಕಿದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ನಿವಾಸಿಗಳು ನದಿಗೆ ಅಡ್ಡಲಾಗಿ ಮರದ ಕಂಬದಿಂದ ಮಾಡಿದ ಕಾಲು ಸಂಕದ ಮೂಲಕ ನದಿ ದಾಟುತ್ತಾರೆ.

ಆದರೆ ಮಳೆಗಾಲದಲ್ಲಿ ನದಿ ತುಂಬಿ ರಭಸವಾಗಿ ಹರಿಯುವುದರಿಂದ ಮಳೆ ನೀರಿಗೆ ತೊಯ್ದು ಜಾರುವ ಕಾಲುಸಂಕದಲ್ಲಿ ನದಿ ದಾಟಿದರೆ ಪ್ರಾಣಾಪಾಯ ಸಂಭವಿಸುವ ಭೀತಿಯಿಂದ ನಿವಾಸಿಗಳು ಮಳೆಗಾಲದಲ್ಲಿ ಈ ನದಿಯ ಸಹವಾಸಕ್ಕೆ ಹೋಗದೇ ಸುಮಾರು 2 ಕಿ.ಮೀ. ಸುತ್ತಿ ಬಳಸಿ ಹೊಲಗದ್ದೆಗಳಿಗೆ ಹಾಗೂ ಪಟ್ಟಣಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದ ಈ ಸಮಸ್ಯೆಯಿಂದ ಪಾರಾಗಲು ನಿವಾಸಿಗಳು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂದು ಕಳಸ ಗ್ರಾಮ ಪಂಚಾಯತ್ ಹಾಗೂ ಜಿಪಂ ಸದಸ್ಯರಲ್ಲಿ ಮನವಿ ಮಾಡಿದ ಪರಿಣಾಮ ಈ ಭಾಗದ ಜಿಪಂ ಸದಸ್ಯ ಕೆ.ಪ್ರಭಾಕರ್‍ ಗೌಡ ಗ್ರಾಪಂ ಅನುದಾನದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ಸೇತುವೆ ನಿರ್ಮಿಸಲು ಮುಂದಾಗಿದ್ದರ ಫಲವಾಗಿ ಕಳಸ ಪಟ್ಟಣದ ಗುತ್ತಿಗೆದಾರರೊಬ್ಬರು ಕಳೆದ ನಾಲ್ಕು ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಆದರೆ ಗುತ್ತಿಗೆದಾರ ಹಳ್ಳದ ಎರಡು ಬದಿಯಲ್ಲಿ ಎರಡು ಕಾಂಕ್ರೀಟ್ ಪಿಲ್ಲರ್‍ಗಳನ್ನು ನಿರ್ಮಿಸಿ ಹೋಗಿ ನಾಲ್ಕು ವರ್ಷ ಕಳೆದಿದ್ದರೂ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಹಡ್ಲುಮನೆ ಸಮೀಪದಲ್ಲಿ ಕೋಣೇಬೈಲು, ನೀರುಕಟ್ಟು, ದೇವರಪಾಲು, ದೇವರಗುಡ್ಡ ಗ್ರಾಮಗಳ ನಿವಾಸಿಗಳಿಗೆ ಹಡ್ಲುಮನೆ ಮೂಲಕ ಕಳಸ ಪಟ್ಟಣ ಸಂಪರ್ಕಕ್ಕೆ ಹತ್ತಿರದ ದಾರಿಯಾಗಿದೆ. ಬೇಸಿಗೆಯಲ್ಲಿ ಈ ನಿವಾಸಿಗಳೂ ಹಡ್ಲುಮನೆ ಮಾರ್ಗವಾಗಿಯೇ ಪಟ್ಟಣಕ್ಕೆ ತಿರುಗಾಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಹಳ್ಳ ದಾಟಲಾಗದೇ ದೂರದ ರಸ್ತೆಗಳ ಮೂಲಕ ಪಟ್ಟಣಕ್ಕೆ ಬರುವಂತಾಗಿದೆ.

ಇನ್ನಾದರೂ ಸಂಬಂಧಿಸಿ ಗ್ರಾಪಂ ಹಾಗೂ ಜಿಪಂ ಸದಸ್ಯರು ಅಪೂರ್ಣಗೊಂಡಿರುವ ಈ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಕೊಡುವ ಮೂಲಕ ಮಳೆಗಾದಲ್ಲಿ ಇಲ್ಲಿನ ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು ಅನುಭವಿಸುವ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಅಪೂರ್ಣ ಕಾಮಗಾರಿ ನಡೆಸಿ ಅನುದಾನದ ದುರ್ಬಳಕೆ ಮಾಡಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

2014ರಲ್ಲಿ ನಡೆದ ಜಿಪಂ ಚುನಾವಣೆ ಸಂದರ್ಭ ಓಟು ಕೇಳಲು ಬಂದವರ ಬಳಿ ಇಲ್ಲಿನ ನಿವಾಸಿಗಳ ಸಮಸ್ಯೆ ಹೇಳಿಕೊಂಡಿದ್ದೆವು. ಅವರು ಗೆದ್ದ ಬಳಿಕ ಗ್ರಾಪಂ ಅನುದಾನದಲ್ಲಿ ಮನೆ  ಸಮೀಪದಲ್ಲಿ ಹರಿಯುವ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಡಿಸಿದ್ದರು. ಗುತ್ತಿಗೆದಾರರೊಬ್ಬರು ಕಾಮಗಾರಿ ಗುತ್ತಿಗೆ ಪಡೆದು ಹಳ್ಳದಲ್ಲಿ ಎರಡು ಪಿಲ್ಲರ್‍ ಗಳನ್ನು ನಿರ್ಮಿಸಿ ಹೋದವರು ಮತ್ತೆ ಇತ್ತ ತಲೆ ಹಾಕಿಲ್ಲ. ಆದರೆ ಗ್ರಾಪಂನಲ್ಲಿ 90 ಸಾವಿರ ರೂ ಬಿಲ್ ಮಾಡಿಕೊಂಡಿರುವ ಬಗ್ಗೆ ಸಿಬ್ಬಂದಿಯೇ ತಿಳಿಸಿದ್ದಾರೆ. ಈ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ದಾಟಲು ಕಾಲು ಸಂಕ ಬಳಸಬೇಕಿದೆ. ಪ್ರಾಣಾಪಾಯದ ಭೀತಿಯಿಂದ ಸಂಕ ದಾಟಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು.
- ಸತೀಶ್, ನಿವಾಸಿ, ಹಡ್ಲುಮನೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News