ಯೋಧರಾಗುವ ತವಕದಲ್ಲಿ ಸಂತ್ರಸ್ತ ಯುವಕರು : ಸೇನಾ ನೇಮಕಾತಿ ರ್ಯಾಲಿಗೆ ಯುವ ತಂಡ ಸಜ್ಜು

Update: 2018-10-07 14:11 GMT

ಮಡಿಕೇರಿ,ಅ.7 : ಕೊಡಗು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳ ಯುವಕರು ಇದೀಗ ಭಾರತೀಯ ಸೇನೆ ಸೇರಲು ಸಜ್ಜಾಗುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳ 50ಕ್ಕೂ ಹೆಚ್ಚು ಯುವಕರು ಅ.14 ರಂದು ಮಂಡ್ಯದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪೂರ್ವ ತಯಾರಿ ನಡೆಸುತ್ತಿದ್ದಾರೆ.

ಮಡಿಕೇರಿ ಕೊಡವ ಸಮಾಜ, ಸೇನೆ ಸೇರ್ಪಡೆಗೆ ಒಲವು ತೋರಿರುವ ಯುವಕರಿಗೆ 2 ವಾರಗಳ ಉಚಿತ ತರಬೇತಿ ನೀಡಲು ಮುಂದಾಗಿದೆ. ದೈಹಿಕ ಪರೀಕ್ಷೆಯೊಂದಿಗೆ ಸೇನೆ ನಡೆಸುವ ಲಿಖಿತ ಪರೀಕ್ಷೆಗೂ ಯುವಕರನ್ನು ಸಜ್ಜುಗೊಳಿಸಲಾಗುತ್ತಿದ್ದು, ಆ ಮೂಲಕ ಉದ್ಯೋಗದ ಭದ್ರತೆ ಒದಗಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಎನ್‍ಸಿಸಿ ವಿಂಗ್‍ನ ಕರ್ನಲ್ ಬೆಳ್ಳಿಯಪ್ಪ ಮತ್ತು ನಾಯಕ್ ವೀರೇಶ್ ಅವರುಗಳು ಸೇನಾ ಭರ್ತಿಗೆ ಆಸಕ್ತಿ ತೋರಿರುವ ಯುವಕರಿಗೆ  ದೈಹಿಕ ಮತ್ತು ಲಿಖಿತ ಪರೀಕ್ಷೆಯ ತಯಾರಿ ಕುರಿತು ಮಾಹಿತಿ ನೀಡಿದರು. ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಭಾರತೀಯ ಸೇನಾ ಸೇರ್ಪೆಡೆ ವಿಧಾನ, ಅರ್ಹತೆಗಳು ಮತ್ತು ಮಾನದಂಡಗಳ ಕುರಿತು ಯುವಕರಿಗೆ ಕರ್ನಲ್ ಬೆಳಿಯಪ್ಪ ಮಾಹಿತಿ ನೀಡಿದರು. ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಯುವಕರಿಗೆ ಈಗಾಗಲೇ ಹಾಜರಾತಿ ಕಾರ್ಡ್ ವಿತರಿಸಲಾಗಿದ್ದು, ಅ.14ರ ಬೆಳ್ಳಗ್ಗೆ 4 ಗಂಟೆಗೆ ಸೇನಾ ನೇಮಕಾತಿ ನಡೆಯುವ ಮೈದಾನದಲ್ಲಿ ಖಡ್ಡಾಯವಾಗಿ ಹಾಜರಿರಬೇಕೆಂದು ಕರ್ನಲ್ ಬೆಳ್ಳಿಯಪ್ಪ ಸೂಚಿಸಿದರು.

1.6 ಕಿ.ಮೀ ರನ್ನಿಂಗ್ ಮತ್ತು ಪುಲ್‍ಅಪ್ಸ್ ಪರೀಕ್ಷೆ ಮೊದಲ ಹಂತದಲ್ಲಿ ನಡೆಯಲಿದೆ. ಈ ಎರಡೂ ಪರೀಕ್ಷೆಗೆ ತಲಾ 60 ಮತ್ತು 40 ಅಂಕಗಳನ್ನು ನಿಗಧಿ ಪಡಿಸಲಾಗುತ್ತದೆ. ರನ್ನಿಂಗ್ ಪರೀಕ್ಷೆಯಲ್ಲಿ ಪ್ರತಿ ಸೆಕೆಂಡ್‍ಗಳು ಕೂಡ ಮಹತ್ವದಾಗಿದ್ದು, ಅಂಕ ಗಳಿಕೆಗೂ ಸಹಕಾರಿಯಾಗಿರುತ್ತದೆ. ಹೀಗಾಗಿ ಓಟದ ಆರಂಭದಲ್ಲೇ ವೇಗದ ತೀವ್ರತೆಯನ್ನು ಕಾಪಾಡಿಕೊಂಡು ಗರಿಷ್ಟ ಅಂಕ ಗಳಿಕೆ ಕಡೆ ಚಿತ್ತ ಹರಿಸಬೇಕೆಂದು ಕರ್ನಲ್ ಬೆಳ್ಳಿಯಪ್ಪ ತಿಳಿಸಿದರು. ಮೊದಲ ಹಂತದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದರೆ ನಂತರ ನಡೆಯುವ ಲಿಖಿತ ಪರೀಕ್ಷೆಗೂ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಮಾತನಾಡಿದ ನಿವೃತ್ತ ಕರ್ನಲ್ ಮುತ್ತಣ್ಣ, ಪ್ರಕೃತಿ ವಿಕೋಪದಲ್ಲಿ ಸಂತಸ್ತರಾದ ಕುಟುಂಬಗಳ ಯುವಕರನ್ನು ಭಾರತೀಯ ಸೇನೆ ಸೇರ್ಪೆಡೆಗೆ ಸಜ್ಜುಗೊಳಿಸಲು ತರಬೇತಿ ನೀಡಲಾಗುತ್ತಿದೆ. ದೇಶ ಸೇವೆಗೆ ಭಾರತೀಯ ಸೇನೆ ಉತ್ತಮ ವೇದಿಕೆಯಾಗಿದ್ದು ಆ ಮೂಲಕ ಸಂತ್ರಸ್ತ ಕುಟುಂಬಗಳ ಯುವಕರಿಗೆ ಉದ್ಯೋಗ ದೊರೆದಂತಾಗುತ್ತದೆ. ಭೂ ಸೇನೆಯೊಂದಿಗೆ ನೌಕಾದಳ ಮತ್ತು ವಾಯುಪಡೆ ಭರ್ತಿಗೂ ತರಬೇತಿ ನೀಡುವ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಈ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
 ಈ ಸಂದರ್ಭ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರುಗಳಾದ ಮಾದೇಟಿರ ಬೆಳ್ಯಪ್ಪ, ಡಾನ್ ಮತ್ತಿತ್ತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News