ವರಿಷ್ಠರ ತೀರ್ಮಾನಕ್ಕೆ ಬದ್ಧ: ಚಲುವರಾಯಸ್ವಾಮಿ

Update: 2018-10-07 16:53 GMT

ಬೆಂಗಳೂರು, ಅ. 7: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಬೇಕಿಲ್ಲದಿರಬಹುದು. ಆದರೆ, ನಾವು ಪಕ್ಷಕ್ಕೆ ಬೇಕಿದ್ದೇವೆ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುವ ಬಗ್ಗೆ ಇನ್ನೂ ಯಾವುದೇ ಚರ್ಚೆಯೇ ಆಗಿಲ್ಲ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಆದರೆ,ಈ ಹಿಂದೆ ಕಾಂಗ್ರೆಸ್ ಕೂಡ ಹಲವು ಕ್ಷೇತ್ರಗಳನ್ನು ಗೆದ್ದಿತ್ತು. ದೇವೇಗೌಡ ಏನೇ ಮಾತನಾಡಲಿ, ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು.

ಹಾಸನ ಹಾಗೂ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದೇನು ಇಲ್ಲ. ಕಾಂಗ್ರೆಸ್ ಮುಖಂಡರು ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ. ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಚಲುವರಾಯಸ್ವಾಮಿ ಸ್ಪಷ್ಟಣೆ ನೀಡಿದರು.

ಅಂಬರೀಶ್ ಅವರು ವಿಶ್ರಾಂತಿಯಲ್ಲಿದ್ದಾರೆಯೋ, ಕಾಂಗ್ರೆಸ್‌ನಲ್ಲಿದ್ದಾರೆಯೋ ಅಥವಾ ಜೆಡಿಎಸ್‌ನಲ್ಲಿದ್ದಾರೆಯೋ ನನಗೆ ಗೊತ್ತಿಲ್ಲ. ಅವರನ್ನು ಓರ್ವ ಕಲಾವಿದರನ್ನಾಗಿ ನಾನು ನೋಡಿದ್ದೇವೆ. ಅವರನ್ನು ನಾನು ರಾಜಕಾರಣಿಯಾಗಿ ನೋಡಲು ಇಚ್ಚಿಸುವುದಿಲ್ಲ ಎಂದು ಪರೋಕ್ಷ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News