×
Ad

ಬಸವಣ್ಣರನ್ನು ಅರ್ಥ ಮಾಡಿಕೊಳ್ಳದ ಬದುಕಿಗೆ ಅರ್ಥವಿಲ್ಲ: ಮುರುಘಾ ಶ್ರೀ

Update: 2018-10-08 18:28 IST

ದಾವಣಗೆರೆ,ಅ.8: ಬಸವಣ್ಣ ಅವರನ್ನು ಅರ್ಥ ಮಾಡಿಕೊಳ್ಳದ ಬದುಕು ಅರ್ಥವಿಲ್ಲದ್ದು. ಶರಣ ಪಥ, ಬಸವ ಪಥ ಅದು ಒಂದು ರೀತಿಯ ‘ಅಗ್ನಿ’ರಥ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. 

ಇಲ್ಲಿನ ಶಿವಯೋಗಾಶ್ರಮದಲ್ಲಿ ಭಾನುವಾರ ಸಂಜೆ ನಡೆದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ 62ನೇ ವರ್ಷದ ರಥೋತ್ಸವ ಮತ್ತು ವಚನಗ್ರಂಥ ಮೆರವಣಿಗೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿ, ಬಸವಣ್ಣ ಅವರದ್ದು ಶರಣ ಪಥ, ಬಸವ ಪಥ ಅದು ಆಗ್ನಿ ರಥವಾಗಿತ್ತು. ಶರಣ ಪಥವನ್ನು ಆಗ್ನಿ ರಥಕ್ಕೆ ಹೋಲಿಸಬೇಕಾಗಿದೆ ಅಂದರೆ, ಅಲ್ಲಿ ಕಾವು, ಅದು ಕ್ರಾಂತಿ ಕಾವು, ಪರಿವರ್ತನೆಯ ಕಾವು ಆಗಿತ್ತು ಎಂದ ಅವರು, ಜಯದೇವ ಗುರುಗಳು ಬಸವಣ್ಣ ಅವರನ್ನು ಸಾಕ್ಷಾತ್ಕರಿಸಿಕೊಂಡು ಅವರ ಸಿದ್ಧಾಂತದಲ್ಲೇ ಬದುಕು ನಡೆಸಿದರು. ರಾದ್ಧಾಂತ, ವೇದಾಂತಕ್ಕೆ ಬದುಕನ್ನು ಸೀಮಿತಗೊಳಿಸಿಕೊಳ್ಳದೇ ಬಸವ ಜೀವನ ನಡೆಸುವ ಮೂಲಕ ಬದುಕನ್ನು ಸಂಪಾದಿಸಿದರು. ಹೀಗಾಗಿ, ಜಯದೇವ ಗುರುಗಳು ಓರ್ವ ಮಹಾನ್ ಸಂತರು ಎಂದು ಅವರು ಬಣ್ಣಿಸಿದರು. 

ಸ್ವಾಮಿಗಳಾಗಲೂ ಸ್ವಾಮೀಜಿ ಆಗುವುದಲ್ಲ, ಸಮಾಜ ತಾಯಿ-ತಂದೆ ಬಂಧು-ಬಳಗವೆಂದು ತಿಳಿದು ಸಾಮಾಜಿಕ ಸ್ವರೂಪ ನೀಡುವರು ನಿಜವಾದ ಸ್ವಾಮೀಜಿ. ಅಷ್ಟೇ ಅಲ್ಲದೇ, ಸಮಾನತೆ, ಮಾನವೀಯತೆ ಮತ್ತು ಆಧ್ಯಾತ್ಮಗಳನ್ನು ಇಟ್ಟುಕೊಂಡಿರುವರು ಸ್ವಾಮೀಜಿ ಎಂದರು.

ಮುರುಘಾ ಮಠ ಸಮಾನತೆ ಮಾನ್ಯತೆ ನೀಡಿದ ಮಠ. ಆಸ್ಪೃಶ್ಯರಿಗೆ ಬಾಗಿಲು ತೆರೆದ ಸಂದರ್ಭ ಇದಕ್ಕೆ ಅಂದು ಕೆಲವರು ವ್ಯಂಗ್ಯವಾಡಿದರು. ಆದರೂ ಮಠ ಇಂದಿಗೂ ಅನೇಕ ಕಾರ್ಯಕ್ರಮ ಮಾಡುವ ಮೂಲಕ ಸಮಾನತೆ ಪೋಷಿಸುತ್ತಿದೆ. ಆಧ್ಯಾತ್ಮದಿಂದ ಬದುಕು ಸುಂದರವಾಗಿ ರೂಪಿಸಿಕೊಳ್ಳುವಂತೆ ಮಾಡುತ್ತಿದೆ ಎಂದ ಅವರು, ಜಯದೇವ ಗುರುಗಳು ಅನೇಕ ನಾಯಕರನ್ನು ಬೆಳೆಸಿದರು. ಬಿ.ಡಿ. ಜತ್ತಿ, ನಿಜಲಿಂಗಪ್ಪ ಸೇರಿದಂತೆ ಅನೇಕರು ಮುರುಘಾ ಮಠಕ್ಕೆ ಅಪಾರ ಗೌರವ ಹೊಂದಿದ್ದರು. ಇದಕ್ಕೆ ಉದಾಹರಣೆಯಂತೆ ದಾವಣಗೆರೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ನಿಜಲಿಂಗಪ್ಪ ಅವರ ಕಾರಣಕರ್ತರು. ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆರ್ಥಿಕ ನೆರವು ನೀಡಿದ್ದು ಮುರುಘಾ ಮಠ ಅನ್ನುವುದನ್ನು ಯಾರು ಮರೆಯಬಾರದು ಎಂದು ಅವರು ನೆನಪಿಸಿದರು. 

ಭಾವಚಿತ್ರಗಳು ಗೆದ್ದಲು ಹಿಡಿದು ಹೋಗುತ್ತವೆ, ಅದು ಕಾಲಧರ್ಮ. ಆದರೆ, ನಮ್ಮ ನಮ್ಮ ಮನಸ್ಸಿನಲ್ಲಿ ಮಹನೀಯ ಭಾವನೆ ಚಿತ್ರವಿರಬೇಕು. ಜಯದೇವ ಗುರುಗಳ ಭಾವಚಿತ್ರ ಮನೆಯಲ್ಲಿದ್ದರೆ ಸಾಲದು ಭಾವನೆಗಳಲ್ಲೂ ಇರಬೇಕು. ಹೀಗಾಗಿ, ಅವರ ಭಾವಚಿತ್ರ ಮನೆ ಮನೆಯಲ್ಲಿ ತುಂಬಿಸಿಕೊಳ್ಳೋಣವೆಂದರು. 

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ರಾಜ್ಯ ಪ್ರಶಸ್ತಿ ವಿಜೇತ ಚಿಂದೋಡಿ ಬಂಗಾರೇಶ್ ಮಾತನಾಡಿದರು. ಕದಳಿ ವೇದಿಕೆ ಅಧ್ಯಕ್ಷೆ ಪ್ರಮೀಳಾ ನಟರಾಜ್, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಮತ್ತಿತರರು ಇದ್ದರು. ಎಂ.ಕೆ. ಬಕ್ಕಪ್ಪ ಸ್ವಾಗತಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News