ಕಿತ್ತೂರು ಉತ್ಸವಕ್ಕೆ 2 ಕೋಟಿ ರೂ.ಅನುದಾನ ಬೇಡಿಕೆ: ಸಚಿವ ರಮೇಶ್ ಜಾರಕಿಹೊಳಿ

Update: 2018-10-08 13:19 GMT

ಬೆಳಗಾವಿ, ಅ.8: ಇದೇ ತಿಂಗಳು 23 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕಿತ್ತೂರು ಉತ್ಸವಕ್ಕೆ 2 ಕೋಟಿ ರೂ.ಅನುದಾನ ನೀಡುವಂತೆ ಕೋರಲು ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಉತ್ಸವವನ್ನು ಆಚರಿಸಲು ಸರಕಾರ ನೀಡುತ್ತಿರುವ 30 ಲಕ್ಷ ರೂ. ಅನುದಾನ ಸಾಕಾಗುತ್ತಿಲ್ಲ. ಸ್ಥಳೀಯ ಶಾಸಕರನ್ನು ಕರೆದುಕೊಂಡು ಶೀಘ್ರದಲ್ಲಿಯೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಉತ್ಸವಕ್ಕೆ ಪ್ರತಿವರ್ಷ ಎರಡು ಕೋಟಿ ರೂ.ಅನುದಾನ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಜಯಂತಿ ದಿನಾಂಕ ಬದಲಿಸಲು ಮನವಿ: ಸರಕಾರವು ಅ.23ರಂದು ಚನ್ನಮ್ಮ ಜಯಂತಿ ಆಚರಿಸಲು ನಿರ್ಧರಿಸಿದ್ದು, ಇದನ್ನು ಬದಲಾಯಿಸಿ ನವೆಂಬರ್ 14 ರಂದು ಜಯಂತಿ ಆಚರಿಸಬೇಕು ಎಂದು ಸಾಹಿತಿ ಯ.ರು.ಪಾಟೀಲ್ ಆಗ್ರಹಿಸಿದರು.

ವೀರ ರಾಣಿ ಕಿತ್ತೂರು ಚನ್ನಮ್ಮ ನವೆಂಬರ್ 14 ರಂದು ಹುಟ್ಟಿದ್ದು, ಈ ಬಗ್ಗೆ ಅನೇಕ ದಾಖಲೆಗಳಿವೆ. ಅಕ್ಟೋಬರ್ 23 ವಿಜಯೋತ್ಸವದ ದಿನವಾಗಿದೆ. ಆದರೆ ಸರಕಾರವು ಅ.23ರಂದು ಜಯಂತಿ ಆಚರಣೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಬದಲಾಯಿಸಬೇಕು ಎಂದು ಅವರು, ಸಚಿವರ ಗಮನಕ್ಕೆ ತಂದರು. ಉತ್ಸವದ ಸಂದರ್ಭದಲ್ಲಿ ಪೂರ್ಣಪ್ರಮಾಣದಲ್ಲಿ ಕೃಷಿಮೇಳ ಆಯೋಜಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿವರ್ಷದಂತೆ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲು ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ತಮ್ಮ ಸಂಪೂರ್ಣ ಸಹಮತವಿದ್ದು, ಯಾವುದೇ ಕೊರತೆಯಾಗದಂತೆ ಸ್ಥಳೀಯ ಜನರ ಆಶಯದಂತೆ ಉತ್ಸವ ಯಶಸ್ವಿಯಾಗಿ ನಡೆಯಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ವೀರಜ್ಯೋತಿ 16 ರಿಂದ: ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ವೀರಜ್ಯೋತಿ ಸಂಚರಿಸಲಿದ್ದು, ಈ ಜ್ಯೋತಿಗೆ ಅ.16ರಂದು ಕಿತ್ತೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.

ಉತ್ಸವದ ಅಂಗವಾಗಿ ಸ್ವಾಗತ ಸಮಿತಿ, ವೇದಿಕೆ, ಆಹಾರ, ಕ್ರೀಡೆ, ಸಾಂಸ್ಕೃತಿಕ ಮತ್ತಿತರ ಸಮಿತಿಗಳನ್ನು ರಚಿಸಲಾಗಿದ್ದು, ಉತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಹೆಲಿಟೂರಿಸಂ ಉತ್ಸವದ ಆಕರ್ಷಣೆಯಾಗಲಿದ್ದು, ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಮೂಲಕ ಜಿಲ್ಲೆಯ ದರ್ಶನದ ಸೌಲಭ್ಯ ಸಿಗಲಿದೆ ಎಂದು ಭಜಂತ್ರಿ ಹೇಳಿದರು.

ಶಾಸಕರಾದ ಸತೀಶ್ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪಹೆಚ್.ಬಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News