ಅ.24 ರಿಂದ ಬಿಆರ್‌ಟಿಎಸ್ ಬಸ್ ಸೇವೆ ಧಾರವಾಡದ ವರೆಗೆ ವಿಸ್ತರಣೆ: ದರ್ಪಣ್ ಜೈನ್

Update: 2018-10-08 13:22 GMT

ಧಾರವಾಡ, ಅ.6: ಅಕ್ಟೊಬರ್ 2 ರಂದು ಹುಬ್ಬಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಬಿಆರ್‌ಟಿಎಸ್ ಬಸ್ ಸಂಚಾರವನ್ನು ಬರುವ 24 ರಿಂದ ಧಾರವಾಡದವರೆಗೆ ವಿಸ್ತರಿಸಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದರ್ಪಣ್ ಜೈನ್ ತಿಳಿಸಿದ್ದಾರೆ.

ಧಾರವಾಡ ನಗರದ ಮಿತ್ರ ಸಮಾಜ ಆವರಣದಲ್ಲಿರುವ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಆರ್‌ಟಿಎಸ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಹುಬ್ಬಳ್ಳಿಯ ಬಿಎಸ್ಸೆನ್ನೆಲ್ ಬಸ್ ನಿಲ್ದಾಣದಿಂದ ಈಗ ನಿತ್ಯ ಐದು ಬಿಆರ್‌ಟಿಎಸ್ ಬಸ್‌ಗಳು ಉಣಕಲ್‌ವರೆಗೆ ಸಂಚರಿಸುತ್ತಿವೆ. ಅ.10 ರಿಂದ ರಾಯಪೂರ ವರೆಗೆ ಮತ್ತು ನಂತರದ ದಿನಗಳಲ್ಲಿ ಧಾರವಾಡದ ಟೊಲ್‌ನಾಕಾವರೆಗೆ ಬಸ್ ಸಂಚಾರವನ್ನು ಆರಂಭಿಸಲಾಗುವುದು. ಅ.24 ರಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಆರ್‌ಟಿಎಸ್ ಬಸ್‌ಗಳು ಸಂಚರಿಸಲಿವೆ ಎಂದು ಅವರು ಹೇಳಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಬಿಆರ್‌ಟಿಎಸ್ ಬಸ್ ನಿಲ್ದಾಣಗಳ ಹತ್ತಿರ ಅಗತ್ಯವಿರುವಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೆ ಸಮಿಕ್ಷೆ ಮಾಡಿದ್ದು, ಇನ್ನು ಬೇಕಿರುವ ಸ್ಥಳಗಳಲ್ಲಿ ಪಾರ್ಕಿಂಗ್ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ದರ್ಪಣ್ ಜೈನ್ ತಿಳಿಸಿದರು.

ಅವಳಿ ನಗರದಲ್ಲಿ ಸಂಚರಿಸುತ್ತಿರುವ ಬೇಂದ್ರೆ ಖಾಸಗಿ ಬಸ್ ಸೇವೆಯ ಪರವಾನಿಗೆ ಅವಧಿ ಜೂನ್ 2019ಕ್ಕೆ ಮುಗಿಯಲಿದೆ. ಅವಳಿ ನಗರದ ನಾಗರಿಕರೂ ಸೇರಿದಂತೆ ನಗರಕ್ಕೆ ಆಗಮಿಸುವ ಬೇರೆ ಊರುಗಳ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಲು ಬಿಆರ್‌ಟಿಎಸ್ ಬದ್ಧವಾಗಿರುವುದರಿಂದ ಖಾಸಗಿ ಬಸ್ ಸೇವೆಯ ಪರವಾನಿಗೆ ಅವಧಿ ಮುಗಿದ ನಂತರ ನವೀಕರಣ ಮಾಡದಂತೆ ಸರಕಾರಕ್ಕೆ ಕೋರಲಾಗಿದೆ ಎಂದು ಅವರು ತಿಳಿಸಿದರು. ಬಿಆರ್‌ಟಿಎಸ್ ಬಸ್ ಸೇವೆಯೊಂದಿಗೆ ನಗರ ಸಾರಿಗೆಯನ್ನು ಸಮನ್ವಯಗೊಳಿಸಿ ನಗರದ ತುಂಬಾ ಸಂಚರಿಸಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಒಂದೇ ಟಿಕೆಟ್ ಅನ್ವಯವಾಗುವಂತೆ ಸ್ಮಾರ್ಟ್‌ಕಾರ್ಡ್ ನೀಡಲು ಯೋಚಿಸಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಲಿದೆ. ಪ್ರಾಯೋಗಿಕ ಬಿಆರ್‌ಟಿಎಸ್ ಸಂಚಾರ ಸೇವೆಗೆ ಅವಳಿನಗರದ ನಾಗರಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸ್ವಚ್ಛತೆ, ಶಿಸ್ತು ಮತ್ತು ಸಂಯಮದಿಂದ ಸಾರ್ವಜನಿಕರು ಬಿಆರ್‌ಟಿಎಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅವರು ಹೇಳಿದರು.

ಅವಳಿನಗರದ ನಾಗರಿಕರ ಮತ್ತು ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಹಕಾರದಿಂದ ಬಿಆರ್‌ಟಿಎಸ್ ಬಸ್ ಸೇವೆ ರಾಷ್ಟ್ರಕ್ಕೆ ಮಾದರಿಯಾಗಲಿದೆ. ಈ ಉತ್ತಮ ಸಂಚಾರ ವ್ಯವಸ್ಥೆಯಿಂದ ಅಭಿವೃದ್ಧಿಗೆ ಇನ್ನಷ್ಟು ಅವಕಾಶವಾಗಲಿದೆ ಎಂದು ದರ್ಪಣ್ ಜೈನ್ ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಡಬ್ಲು.ಕೆ.ಆರ್.ಟಿ.ಸಿ ಹಾಗೂ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ್ತು ಬಿಆರ್‌ಟಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News