ಬೆಳಗಾವಿ: ಸ್ಮಾರ್ಟ್ ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Update: 2018-10-08 13:41 GMT

ಬೆಳಗಾವಿ, ಅ.8: ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, 5 ಕೋಟಿ ರೂ.ವೆಚ್ಚದಲ್ಲಿ ಕಣಬರಗಿ ಕೆರೆ ಅಭಿವೃದ್ಧಿ ಹಾಗೂ 30 ಕೋಟಿ ರೂ.ವೆಚ್ಚದಲ್ಲಿ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದರು.

ಸ್ಮಾರ್ಟ್ ರಸ್ತೆ ಕಾಮಗಾರಿ: ಪ್ಯಾಕೇಜ್-1ರ ಅಡಿಯಲ್ಲಿ 43.64 ಕೋಟಿ ರೂ.ವೆಚ್ಚದಲ್ಲಿ ಧರ್ಮನಾಥ ಜಂಕ್ಷನ್ ರಸ್ತೆ, ಧರ್ಮಭವನ್ ರಸ್ತೆ ಹಾಗೂ ಧರ್ಮ ಮಾರ್ಗ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಪ್ಯಾಕೇಜ್-2ರ ಅಡಿಯಲ್ಲಿ 43.58 ಕೋಟಿ ರೂ.ಶ್ರೀನಗರ ಹಾಗೂ ಆಂಜನೇಯ ನಗರದಲ್ಲಿ ಸ್ಮಾರ್ಟ್ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಅಚ್ಚುಕಟ್ಟಾದ ಪಾದಚಾರಿ ರಸ್ತೆ(ಫುಟ್‌ಪಾತ್), ಸೈಕಲ್ ಟ್ರ್ಯಾಕ್, ಎಲ್‌ಇಡಿ ಬೀದಿ ದೀಪಗಳು, ಚಿಹ್ನೆಗಳು, ಟೇಬಲ್ ಟಾಪ್ ಕ್ರಾಸಿಂಗ್, ಜಂಕ್ಷನ್ ಅಭಿವೃದ್ಧಿಪಡಿಸಲಾಗುತ್ತದೆ.

ಹೆರಿಗೆ ಆಸ್ಪತ್ರೆ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಾಗರಿಕರಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ವಂಟಮುರಿಯ ಸಾಯಿಮಂದಿರದ ಎದುರಿಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.33 ಕೋಟಿ ರೂ.ವೆಚ್ಚದಲ್ಲಿ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ.

24 ಗಂಟೆಗಳ ನಿರಂತರವಾಗಿ ಹೆರಿಗೆ ಸೌಲಭ್ಯ ಮತ್ತು ನವಜಾತು ಶಿಶುಗಳ ಆರೈಕೆ ಕೇಂದ್ರ ಒದಗಿಸುವುದು, ಕನ್ಸಲ್ಟಿಂಗ್ ಕೊಠಡಿ, ಅಲ್ಟ್ರಾಸೌಂಡ್ ಮತ್ತು ಸ್ಕ್ಯಾನಿಂಗ್ ಕೊಠಡಿಗಳು, ಹೆರಿಗೆ ವಾರ್ಡ್‌ಗಳು, ನವಜಾತಶಿಶುಗಳ ತುರ್ತು ನಿಗಾ ಘಟಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಕಟ್ಟಡ ಹೊಂದಲಿದೆ.

ಕಣಬರಗಿ ಕೆರೆ ಅಭಿವೃದ್ಧಿ: 10.40 ಎಕರೆ ವಿಸ್ತಾರವಾಗಿರುವ ಕಣಬರಗಿ ಕೆರೆಯನ್ನು 4.99 ಕೋಟಿ ರೂ.ವೆಚ್ಚದಲ್ಲಿ ಅಭಿವೃದಿಪಡಿಸಲಾಗುತ್ತಿದೆ. ಕೆರೆಯ ಸುತ್ತಲೂ ಪಾಥ್‌ವೇ ನಿರ್ಮಾಣ, ಬೇಲಿ ಹಾಕುವುದು, ಆಂಪಿಥೇಟರ್, ಮಕ್ಕಳ ಆಟಕ್ಕೆ ಸೌಲಭ್ಯಗಳನ್ನು ಒದಗಿಸುವುದು, ಟಿಕೆಟ್ ಕೌಂಟರ್, ಕಿಯೋಸ್ಕ್, ವೀಕ್ಷಣಾಗೋಪುರ ನಿರ್ಮಾಣ, ಶೌಚಾಲಯಗಳು, ಉದ್ಯಾನ ಅಭಿವೃದ್ಧಿ ಹೀಗೆ ಅನೇಕ ಕಾಮಗಾರಿಗಳನ್ನು ಇದು ಒಳಗೊಂಡಿದೆ.

ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲದಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಅನಿಲ್ ಬೆನಕೆ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ಮಹಾಪೌರ ಬಸಪ್ಪಚಿಕ್ಕಲದಿನ್ನಿ, ಉಪ ಮಹಾಪೌರರಾದ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್, ಪಾಲಿಕೆಯ ಸ್ಥಳೀಯ ಸದಸ್ಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News