×
Ad

ಮಡಿಕೇರಿ ದಸರಾ ಸರಳ, ಸಾಂಪ್ರದಾಯಿಕ ಆಚರಣೆಗೆ ನಿರ್ಧಾರ: ಸಚಿವ ಸಾ.ರಾ. ಮಹೇಶ್

Update: 2018-10-08 19:27 IST

ಮಡಿಕೇರಿ, ಅ.8 : ಪ್ರಾಕೃತಿಕ ವಿಕೋಪದಿಂದ ಜಿಲ್ಲೆ ಸಂಕಷ್ಟದಲ್ಲಿರುವುದರಿಂದ ಸಾಂಪ್ರದಾಯಿಕ ಮತ್ತು ಸರಳ ರೀತಿಯಲ್ಲಿ ದಸರಾ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ಹೇಳಿದರು.

ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆದ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ದಸರಾ ಸಮಿತಿಯಿಂದ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಹಾನಿ ಉಂಟಾಗಿದ್ದು, ಜನರು ಸಂತ್ರಸ್ತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಸಾಂಪ್ರದಾಯಕವಾಗಿ ಮತ್ತು ಸರಳ ರೀತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಈ ಭಾರಿಯ ದಸರಾ ಉತ್ಸವಕ್ಕೆ ಸರ್ಕಾರವು ಅನುದಾನ ನೀಡಲಿದ್ದು, ಗೋಣಿಕೊಪ್ಪ ದಸರಾ ಉತ್ಸವಕ್ಕೆ 25 ಲಕ್ಷ ರೂ. ಹಾಗೂ ಮಡಿಕೇರಿ ದಸರಾ ಉತ್ಸವಕ್ಕೆ 50 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.   

ಸಭೆ ಆರಂಭದಲ್ಲಿ ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನ್ ಅವರು ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಜನರ ಬಳಿ ಹೋಗಿ ಚಂದಾ ವಸೂಲಿ ಮಾಡದೆ ಸರ್ಕಾರ ನೀಡುವ ಅನುದಾನದಿಂದ ದಸರಾ ಉತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲಾಗುವುದು. ಆದ್ದರಿಂದ ಸರ್ಕಾರ ಈ ಭಾರಿ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಸಚಿವರಲ್ಲಿ ಮನವಿಯನ್ನು ಮಾಡಿದರು.

ದಶಮಂಟಪ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಅವರು ಮಾತನಾಡಿ, ದಸರಾ ಉತ್ಸವದಲ್ಲಿ 4 ಶಕ್ತಿ ದೇವತೆಗಳ ಆರಾಧನೆ ಮುಖ್ಯವಾಗಿದ್ದು, ಇದೇ 10 ರಿಂದ ನಾಲ್ಕು ಶಕ್ತಿ ದೇವತೆಗಳು ನಗರ ಪ್ರದಕ್ಷಣೆ ಮಾಡಲಿವೆ. ಪತ್ರಿ ವರ್ಷದಂತೆ ಈ ಭಾರಿ ದಸರಾ ಉತ್ಸವವನ್ನು ಸಾಂಪ್ರದಾಯಕವಾಗಿ ಆಚರಿಸಲಾಗುವುದು ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಸಂಕಷ್ಟಗಳ ಬಗ್ಗೆ ದಸರಾ ಸಮತಿ ಪದಾಧಿಕಾರಿಗಳು, ದಶಮಂಟಪ ಸಮಿತಿ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಬಳಿಕ ಸಚಿವರು ಮಡಿಕೇರಿ ಮತ್ತು ಗೊಣಿಕೊಪ್ಪಲು ದಸರಾ ಉತ್ಸವಕ್ಕೆ ಅನುದಾನವನ್ನು ಘೋಷಿಸಿದರು.

ಮುಂಗಾರಿನ ಭಾರೀ ಮಳೆಯಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಗುಡ್ಡ ಕುಸಿತದಿಂದ ಮತ್ತೆ ಕೆಲವೆಡೆಗಳಲ್ಲಿನ ನೆರೆ ಹಾವಳಿಯಿಂದ ಉಂಟಾದ ಅನಾಹುತಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅದ್ಧೂರಿಯ ದಸರಾ ಆಚರಣೆ ಸಮಂಜಸವಲ್ಲ. ಬದಲಾಗಿ ಸಾಂಪ್ರದಾಯಿಕ ಆಚರಣೆಗಳಷ್ಟ ನಡೆಯುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತ: ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಉದ್ದೇಶಿಸಲಾಗಿದೆ. ವರ್ಷಂಪ್ರತಿ ನಡೆಯತ್ತಿದ್ದ ನವರಾತ್ರಿಯ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಮಹಿಳಾ ದಸರಾ, ಯುವ ದಸರಾ ಇವೆಲ್ಲವುಗಳನ್ನು ಈ ಬಾರಿ ಕೈಬಿಡಲಾಗಿದೆಯೆಂದು ಸ್ಪಷ್ಟಪಡಿಸಿದರು.

ದಶ ಮಂಟಪ ಸಮತಿ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ಮಡಿಕೇರಿಯ ದಸರಾ ಉತ್ಸವಾಚರಣೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಕರಗ ಉತ್ಸವ ಮತ್ತು ದಶಮಂಟಪಗಳ ಶೋಭಾಯಾತ್ರೆಯನ್ನು ಸಾಂಪ್ರದಾಯಿಕವಾಗಿ ಸರಳವಾಗಿ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಚೇಂಬರ್ ಪ್ರಮುಖರಾದ ಜಿ. ಚಿದ್ವಿಲಾಸ್ ಮಾತನಾಡಿ, ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳಿವೆ. ಈ ಹಿನ್ನೆಲೆಯಲ್ಲಿ ಇಂದಿನ ಪೂರ್ವ ಭಾವಿ ಸಭೆ ಹದಿನೈದು ದಿನಗಳ ಹಿಂದೆಯೇ ನಡೆಯಬೇಕಾಗಿತ್ತು ಎಂದು ಅಭಿಪ್ರಾಯಿಸಿ, ಲಭ್ಯ ಸರ್ಕಾರದ ಅನುದಾನದ ಹಂಚಿಕೆಯ ಬಗ್ಗೆಯೂ ನಿರ್ಧಾರವನ್ನು ಕೈಗೊಳ್ಳುವುದು ಅವಶ್ಯವೆಂದು ತಿಳಿಸಿದರು. ದಸರಾ ಉತ್ಸವಕ್ಕೆ ಜಿಲ್ಲೆ ಹೊರ ಜಿಲ್ಲೆಯ ಲಕ್ಷಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ದಸರಾ ಉತ್ಸವ ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಹಾಗೂ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಮನ್ ಡಿ.ಪೆನ್ನೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ದಸರಾ ಸಮಿತಿಯ ಸದಸ್ಯರು, ದಶ ಮಂಟಪ ಸಮಿತಿ ಸದಸ್ಯರು, ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News