ರಾಜ್ಯದಲ್ಲಿ ಅತಿಯಾದ ವಾಹನಗಳ ಸಂಖ್ಯೆ: 5,954 ಕೋಟಿಗೂ ಅತ್ಯಧಿಕ ಆದಾಯ ಸಂಗ್ರಹ

Update: 2018-10-08 14:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.8: ರಾಜ್ಯದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದು, ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಮತ್ತೊಂದು ಕಡೆ ಇದೇ ಸಾರಿಗೆ ಇಲಾಖೆಗೆ ಅಧಿಕ ಆದಾಯದ ಮೂಲವಾಗಿದೆ.

2017-18ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 15.12 ಲಕ್ಷ ಹೊಸ ವಾಹನಗಳು ನೋಂದಣಿಯಾಗಿದ್ದು, ಸಾರಿಗೆ ಇಲಾಖೆ ಒಟ್ಟಾರೆ 5,954 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಇದು ಇಲಾಖೆ ಸಂಗ್ರಹಿಸಿದ ದಾಖಲೆ ತೆರಿಗೆಯಾಗಿದ್ದು, ಸರಕಾರ ನೀಡಿದ್ದ ಗುರಿಗಿಂತಲೂ ಶೇ.7.06 ಹೆಚ್ಚು ಸಾಧನೆ ಮಾಡಿದೆ.

ರಸ್ತೆ ತೆರಿಗೆ, ನೋಂದಣಿ, ಪರವಾನಿಗೆ ತೆರಿಗೆ, ನಿಯಮ ಉಲ್ಲಂಘನೆ ದಂಡ, ಸಾರಿಗೆ ಸೇವೆ ಶುಲ್ಕ ಇದರಲ್ಲಿ ಒಳಗೊಂಡಿದೆ ಎಂದು ಸಾರಿಗೆ ಇಲಾಖೆ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದೆ. ಸರಕಾರ 5,561.62 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಿತ್ತು. ಬೆಂಗಳೂರಿನಲ್ಲೆ ಅತ್ಯಧಿಕ (2,788 ಕೊಟಿ ರೂ.) ತೆರಿಗೆ ಸಂಗ್ರಹವಾಗಿದ್ದು, ವಾಹನ ಸಂಖ್ಯೆ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ. 2017-18ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ 5.73 ಲಕ್ಷ ಹೊಸ ವಾಹನಗಳು ರಸ್ತೆಗಿಳಿದಿವೆ. ನಗರದಲ್ಲಿ ಪ್ರಸ್ತುತ 76 ಲಕ್ಷಕ್ಕೂ ಅಧಿಕ ವಾಹನಗಳಿವೆ.

ದ್ವಿಚಕ್ರ ವಾಹನಗಳೇ ಅಧಿಕ: 2012 ಮಾರ್ಚ್ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 28.67 ಲಕ್ಷ ದ್ವಿಚಕ್ರ ವಾಹನಗಳಿದ್ದವು. 2018 ಜುಲೈ ಅಂತ್ಯಕ್ಕೆ 52.91 ಲಕ್ಷಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1.45 ಕೋಟಿ ದ್ವಿಚಕ್ರ ವಾಹನಗಳಿವೆ. ರಾಜಧಾನಿಯಲ್ಲಿ ಒಟ್ಟು ವಾಹನ ಸಂಖ್ಯೆಯಲ್ಲಿ ಶೇ.70 ದ್ವಿಚಕ್ರ ವಾಹನಗಳೇ ಇವೆ. ಕಳೆದ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 23.67 ಲಕ್ಷ ಕಾರು, 5.36 ಲಕ್ಷ ಟ್ರಾಕ್ಟರ್ ಸೇರಿ ಒಟ್ಟು 1.81 ಕೋಟಿ ಸಾರಿಗೇತರ ವಾಹನಗಳಿತ್ತು. 18.57 ಲಕ್ಷ ಪ್ರಯಾಣಿಕ ವಾಹನಗಳಿವೆ.

ಚೆಕ್‌ಪೋಸ್ಟ್‌ಗಳು: ಚೆಕ್‌ಪೋಸ್ಟ್‌ಗಳಲ್ಲಿ ಪರ್ಮಿಟ್, ಸರಕು ಸಾಗಣೆ ತೆರಿಗೆ ಸಂಗ್ರಹವಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ 19.64 ಕೋಟಿ, ಝಳಕಿ ಚೆಕ್‌ಪೋಸ್ಟ್‌ನಲ್ಲಿ 14.9 ಕೋಟಿ, ನಿಪ್ಪಾಣಿ ಚೆಕ್‌ಪೋಸ್ಟ್‌ನಲ್ಲಿ 13.3 ಕೋಟಿ, ಗುಂಡ್ಲುಪೇಟೆ ಚೆಕ್‌ಪೋಸ್ಟ್‌ನಲ್ಲಿ 10.33 ಕೋಟಿ, ಹುಮ್ನಾಬಾದ್ ಚೆಕ್‌ಪೋಸ್ಟ್‌ನಲ್ಲಿ 5.44 ಕೋಟಿ ಸೇರಿದಂತೆ ರಾಜ್ಯದ ವಿವಿಧ 15 ಚೆಕ್‌ಪೋಸ್ಟ್‌ಗಳಲ್ಲಿ 88.29 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಹುದ್ದೆಗಳು ಖಾಲಿ: ಸಾರಿಗೆ ಇಲಾಖೆ ಗುರಿ ಮೀರಿ ತೆರಿಗೆ ಸಂಗ್ರಹ ಮಾಡಿದ್ದರೂ, ಇಲಾಖೆಯಲ್ಲಿರುವ ಹುದ್ದೆಗಳನ್ನು ತುಂಬಲು ಮುಂದಾಗುತ್ತಿಲ್ಲ. ಇದರಿಂದಾಗಿ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ, ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. 2018 ಮಾ.31ರವರೆಗಿನ ಮಾಹಿತಿಯಂತೆ ಇಲಾಖೆಯಲ್ಲಿ ಮಂಜೂರಾದ 2,806 ಹುದ್ದೆಗಳ ಪೈಕಿ 1,259 ಖಾಲಿ ಹುದ್ದೆಗಳಿವೆ. ಇವುಗಳಲ್ಲಿ 11 ಉಪ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಹುದ್ದೆ, 19 ರಸ್ತೆ ಸಾರಿಗೆ ಅಧಿಕಾರಿಗಳು, 58 ಸಹಾಯಕ ಆರ್‌ಟಿಒ, 76 ಹಿರಿಯ ಮೋಟಾರು ವಾಹನ ನಿರೀಕ್ಷಕ, 298 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News