ಮೈಸೂರು: ಪ್ರಧಾನಿ ಮೋದಿ ವಿರುದ್ಧ ವಿನೂತನ ಪ್ರತಿಭಟನೆ
ಮೈಸೂರು,ಅ.8: ಬೆಲೆ ಏರಿಕೆ ಸೇರಿದಂತೆ, ನೀಡಿದ ಆಶ್ವಾಸನೆಗಳನ್ನು ಈಡೇರಿಸದ ಪ್ರಧಾನಿ ಮೋದಿಯವರ ನಡೆಯನ್ನು ಖಂಡಿಸಿ ಮಹಾಲಯ ಅಮವಾಸ್ಯೆ ದಿನವಾದ ಇಂದು ಎಳ್ಳು ನೀರು ಬಿಡುವ ಮೂಲಕ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ವಿನೂತನ ಪ್ರತಿಭಟನೆ ನಡೆಯಿತು.
ಮೈಸೂರಿನ ದೇವರಾಜ ಮಾರುಕಟ್ಟೆಯ ಚಿಕ್ಕ ಗಡಿಯಾರದ ಬಳಿ ಸೋಮವಾರ ಮೋದಿಯವರ ಭಾವಚಿತ್ರವನ್ನಿಟ್ಟು ಎಳ್ಳು ತರ್ಪಣ ಬಿಡುವ ಅಣುಕು ಪ್ರದರ್ಶನ ನಡೆಸಿ ಪ್ರತಿಭಟಿಸಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು ಬೆಲೆ ಏರಿಕೆ, ಉದ್ಯೋಗ, ಇಂಧನ ವಿಮೆ ಏರಿಕೆ, ಕೊಡುಗು ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ನೀಡದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಗುರುರಾಜ್, ಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್, ರಾಜೇಶ್, ಪ್ರಜ್ವಲ್, ಪ್ರವೀಣ್, ರವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.