ಬೇಡಿಕೆ ಈಡೇರದ ಹೊರತು ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ: ಎಂ.ನಾರಾಯಣ ಸ್ಪಷ್ಟನೆ

Update: 2018-10-08 16:48 GMT

ಮೈಸೂರು,ಅ.8: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ ಮುಂದುವರೆಯಲಿದೆ. ಆದರೆ ಖಾಯಂ ಪೌರಕಾರ್ಮಿಕರು ದಸರಾ ಕೆಲಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪೌರಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಎಂ.ನಾರಣ ಸ್ಪಷ್ಟಪಡಿಸಿದರು.

ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಪಾಲಿಕೆ ಆಯುಕ್ತ ಜಗದೀಶ್ ಅವರ ಜೊತೆ ನಡೆದ ಪೌರಕಾಮಿರ್ಕರ ಸಭೆಯ ನಂತರ ಆಯುಕ್ತರ ಸಮ್ಮುಖದಲ್ಲೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಮುಖಂಡರ ಜೊತೆ ಚರ್ಚಿಸಲಾಗಿದೆ. ಹಾಗಾಗಿ ಖಾಯಂ ಪೌರಕಾರ್ಮಿಕರು ನಿನ್ನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಗುತ್ತಿಗೆ ಪೌರ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಕಳೆದ ರಾತ್ರಿ ಸಚಿವ ಜಿ.ಟಿ ದೇವೇಗೌಡ ಮಾತನಾಡಿದ್ದಾರೆ. ಮತ್ತೋರ್ವ ಸಚಿವ ಸಾ.ರಾ ಮಹೇಶ್ ಕೂಡ ಮಾತನಾಡಿದ್ದಾರೆ. ನಾಳೆ ಮುಖ್ಯಮಂತ್ರಿ ಜೊತೆ ಮಾತುಕತೆಗೆ ಸಮಯ ನಿಗದಿ ಆಗಿರುವ ಬಗ್ಗೆ ಭರವಸೆ ನೀಡಿದ್ದಾರೆ. ನಾಳೆ ಸಿಎಂ ಜೊತೆ ನಡೆಯುವ ಮಾತುಕತೆ ಫಲಪ್ರದವಾಗುವ ವಿಶ್ವಾಸವಿದೆ. ಒಂದು ವೇಳೆ ನಾಳೆ ನಡೆಯುವ ಮಾತುಕತೆ ವಿಫಲವಾದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಬೇಡಿಕೆ ಈಡೇರದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ನಾರಾಯಣ್ ಎಚ್ಚರಿಕೆ ನೀಡಿದರು.

ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳ ಬೇಜವಾಬ್ದಾರಿತನದಿಂದಾಗಿ ಈ ರೀತಿಯ ಸಮಸ್ಯೆ ಎದುರಾಗಿದೆ. ಗುತ್ತಿಗೆ ಪದ್ಧತಿ ಅನಿಷ್ಟ ಪದ್ಧತಿಯಾಗಿದೆ. ಹಾಗಾಗಿ ಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಸರ್ಕಾರ ಆದೇಶ ನೀಡಿದ್ದರೂ, ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಸೂಕ್ತ ಕ್ರಮ ಕೈಗೊಂಡಿಲ್ಲ.ಗುತ್ತಿಗೆ ಪದ್ಧತಿ ಜೀವಂತವಾಗಿಡಲು ಅಧಿಕಾರಿಗಳ ಮಟ್ಟದಲ್ಲಿ ಸಂಚು ನಡೆದಿದೆ ಎಂದು ಹರಿಹಾಯ್ದರು. ಪ್ರತಿಭಟನೆ ಆರಂಭಕ್ಕೂ ಹದಿನೈದು ದಿನ ಗಡುವು ನೀಡಲಾಗಿತ್ತು. ಇದಕ್ಕೆ ಯಾವೊಬ್ಬ ಸರ್ಕಾರಿ ಅಧಿಕಾರಿಯೂ ಸ್ಪಂದಿಸಲಿಲ್ಲ ಎಂದು ದೂರಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಪೌರ ಕಾರ್ಮಿಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಪೌರ ಕಾರ್ಮಿಕರ ಮುಖಂಡ ನಾರಾಯಣ್ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಗುತ್ತಿಗೆ ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ನಾಳೆ ಮುಖ್ಯಮಂತ್ರಿಗಳ ಜೊತೆ ನಡೆಯುವ ಮಾತುಕತೆ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ನಗರ ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News