ದಸರಾ ಸಂಬಂಧಿತ ವಿವಿಧ ಕಾರ್ಯಕ್ರಮ ರದ್ದು: ಶಿವಮೊಗ್ಗ ಮನಪಾ ಆಯುಕ್ತೆ ಚಾರುಲತಾ ಸೋಮಲ್‍

Update: 2018-10-08 17:35 GMT

ಶಿವಮೊಗ್ಗ, ಅ. 8: ಲೋಕಸಭೆ ಉಪ ಚುನಾವಣೆ ಮಾದರಿ ನೀತಿ-ಸಂಹಿತೆಯ ಎಫೆಕ್ಟ್ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿರುವ ದಸರಾ ಹಬ್ಬದ ಕಾರ್ಯಕ್ರಮಗಳ ಮೇಲೂ ಬೀರಿದೆ.

ದಸರ ಹಬ್ಬದ ನಿಮಿತ್ತ ಕಾರ್ಪೋರೇಟರ್ ಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಆಯೋಜಿಸಲಾಗಿದ್ದ ಹತ್ತು ಹಲವು ಕಾರ್ಯಕ್ರಮಗಳನ್ನು, ಚುನಾವಣಾ ಮಾದರಿ ನೀತಿ-ಸಂಹಿತೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲು ಪಾಲಿಕೆ ಆಡಳಿತ ನಿರ್ಧರಿಸಿದೆ. 

'ದಸರಾ ಹಬ್ಬದ ಆರಂಭ ಹಾಗೂ ಅಂತಿಮ ದಿನದ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಇತರೆ ದಿನಗಳಂದು ಆಯೋಜಿಸಲಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುತ್ತಿದೆ. ಲೋಕಸಭೆ ಉಪ ಚುನಾವಣೆ ಮಾದರಿ ನೀತಿ-ಸಂಹಿತೆ ಕಾರ್ಯಗತದಲ್ಲಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ' ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ. 

ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ರದ್ದುಗೊಳಿಸಲಾಗಿರುವ ಕಾರ್ಯಕ್ರಮಗಳಿಗೆ ಬದಲಾಗಿ ಕುವೆಂಪು ರಂಗಮಂದಿರದಲ್ಲಿ ಅ. 10 ರಿಂದ 18 ರವರೆಗೆ ಪ್ರತಿ ದಿನ ಸಂಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನಷ್ಟೆ ಇದರ ರೂಪುರೇಷೆ ಸಿದ್ದವಾಗಬೇಕಾಗಿದೆ' ಎಂದು ತಿಳಿಸಿದ್ದಾರೆ. 

ತೆರವು: ಪಾಲಿಕೆ ವ್ಯಾಪ್ತಿಯಲ್ಲಿ ಮಾದರಿ ನೀತಿ - ಸಂಹಿತೆಯ ಕಟ್ಟುನಿಟ್ಟು ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್-ಬಂಟಿಂಗ್ಸ್, ಬ್ಯಾನರ್ ಳನ್ನು ತೆರವುಗೊಳಿಸಲಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದವಾಗದ ರೀತಿಯಲ್ಲಿ ಪಾಲಿಕೆ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ.

ಸಮಿತಿ ರಚಿಸಲಾಗಿತ್ತು: ಶಿವಮೊಗ್ಗ ನಗರದಲ್ಲಿ ಪ್ರತಿವರ್ಷ ದಸರಾ ಹಬ್ಬವನ್ನು 9 ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೂಡ ಸುಮಾರು 2 ಕೋಟಿ ರೂ.ಗಳನ್ನು ದಸರಾ ಹಬ್ಬದ ಆಚರಣೆಗಾಗಿಯೇ ಮೀಸಲಿಡಲಾಗಿತ್ತು. ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. 

ಈಗಾಗಲೇ ಕೆಲ ಸಮಿತಿಗಳ ಚಟುವಟಿಕೆಗಳು ಕೂಡ ಚಾಲನೆಗೊಂಡಿದ್ದವು. ಇದೀಗ ಚುನಾವಣಾ ಆಯೋಗದ ನಿರ್ದೇಶನದಂತೆ ದಸರಾ ಹಬ್ಬದ ಮೊದಲ ಹಾಗೂ ಅಂತಿಮ ದಿನದ ಸಾಂಪ್ರದಾಯಿಕ ಕಾರ್ಯಕ್ರಮಗಳ ಹೊರತಾಗಿ ಇತರೆಲ್ಲ ಸಭೆಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದು ಜನಪ್ರತಿನಿಧಿಗಳಲ್ಲಿ ನಿರಾಸೆ ಉಂಟು ಮಾಡಿದೆ. 

ರಾಜಕಾರಣಿಗಳಿಗೆ ಆಹ್ವಾನವಿಲ್ಲ : ತುರ್ತು ಸಭೆಯಲ್ಲಿ ನಿರ್ಧಾರ
ಅ. 10 ರಂದು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ವಿಗ್ರಹವನ್ನು ಮೆರವಣಿಗೆಯ ಮೂಲಕ ಕೋಟೆ ರಸ್ತೆಯಲ್ಲಿರುವ ದುರ್ಗಾಂಬ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಹಾಗೂ ದಸರಾ ಉದ್ಘಾಟನೆ ಸಮಾರಂಭಕ್ಕೆ, ಯಾವುದೇ ರಾಜಕೀಯ ಪ್ರತಿನಿಧಿಗಳಿಗೆ ಆಹ್ವಾನ ನೀಡದಿರಲು ಸೋಮವಾರ ನಗರದ ಡಿ.ಸಿ. ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ಅಧ್ಯಕ್ಷತೆಯಲ್ಲಿ ಜರುಗಿದ ದಸರ ಆಚರಣೆಗೆ ಸಂಬಂಧಿಸಿದ ವಿಶೇಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 

ಈ ಮೊದಲೇ ನಿರ್ಧರಿಸಿದಂತೆ ಸಾಹಿತಿ ಹೆಚ್.ಎಸ್.ವೆಂಕಟೇಶ್‍ಮೂರ್ತಿರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಳಿದಂತೆ ಅ. 19 ರಂದು ಮೆರವಣಿಗೆಯಲ್ಲಿ ದೇವರುಗಳನ್ನು ತರುವ ವಿವಿಧ ದೇವಸ್ಥಾನಗಳ ಸಮಿತಿಯವರಿಗೆ ಯಾವುದೇ ಅನುದಾನ ನೀಡದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸ್ವಂತ ಖರ್ಚಿನಲ್ಲಿಯೇ ದೇವರುಗಳಿಗೆ ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಬಂಧಪಟ್ಟ ದೇವಸ್ಥಾನಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ. 

ಹಾಗೆಯೇ ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು ತಲ್ಲೀನವಾಗಿರುವುದರಿಂದ ಜೊತೆಗೆ ನೀತಿ ಸಂಹಿತೆಯ ಕಾರಣದಿಂದ, ಆನೆಯ ಮೂಲಕ ಅಂಬಾರಿಯಲ್ಲಿ ದೇವರ ವಿಗ್ರಹ ತರದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಲಾರಿಯಲ್ಲಿ ದೇವರ ವಿಗ್ರಹವನ್ನು ಮೆರವಣಿಗೆಯಲ್ಲಿ ತರುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News