ಪ್ರಕಾಶ್ ರೈಯವರ ‘ಅವರವರ ಭಾವಕ್ಕೆ’ ಕೃತಿ ಬಿಡುಗಡೆ

Update: 2018-10-09 08:04 GMT

ಮೈಸೂರು, ಅ.9: ನಟ ಪ್ರಕಾಶ್ ರೈ ರಚನೆಯ ‘ಅವರವರ ಭಾವಕ್ಕೆ’ ಕೃತಿ ರವಿವಾರ ಲೋಕಾರ್ಪಣೆಗೊಂಡಿತು.

ಜನಮನ ಮತ್ತು ನೆಲೆ ಹಿನ್ನೆಲೆ ಸಂಸ್ಥೆಯು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಒ.ಎಲ್.ನಾಗಭೂಷಣಸ್ವಾಮಿ ಅವರು ಕೃತಿಯ ಮೊದಲ ಪ್ರತಿಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ದೇವನೂರ ಮಹಾದೇವ, ಪ್ರಕಾಶ್ ರೈಯವರ ಪುಸ್ತಕವನ್ನು ಓದಿ ಟಿಪ್ಪಣಿ ಬರೆಯಬೇಕೆಂದುಕೊಂಡಿದ್ದೇನೆ. ರೈ ಆಲೋಚನೆಯಿಂದ ಬದುಕನ್ನು ನೋಡುವವನ್ನಲ್ಲ, ಹೃದಯ ಮಿಡಿತದಿಂದ ನೋಡುವವನು. ಬರವಣಿಗೆಯಲ್ಲಿ ಸ್ಪಂದನ, ಸ್ಪರ್ಶ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಜೀವನ ಪ್ರವಾಸವಾಗಿರದೆ ಪ್ರಯಾಣವಾಗಿರಬೇಕೆಂಬ ಜ್ಞಾನಿಯ ಮಾತಿನಂತೆ ಪ್ರಕಾಶ್ ರೈ ನಡೆದುಕೊಳ್ಳುತ್ತಿದ್ದಾರೆ. ಇಮೇಜ್ ಇರುವ ವ್ಯಕ್ತಿಗಳು ಬದುಕನ್ನು ಹೇಗೆ ನೋಡಿದ್ದಾರೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಯಬಹುದು. ಅಂಕಣಗಳು ವಾರದಿಂದ ವಾರಕ್ಕೆ ಬದಲಾಗುವುದರಿಂದ ನಿರಂತರತೆ ಇರುವ ಕಾದಂಬರಿ ಬರೆಯಲಿ ಎಂಬುದು ನನ್ನ ಆಶಯ ಎಂದರು.

ಕೃತಿಕರ್ತೃ ಪ್ರಕಾಶ್ ರೈ ಮಾತನಾಡಿ, ಬರವಣಿಗೆ ಕೆಲಸ ನನ್ನ ಮರುಹುಟ್ಟಾಯಿತು. ಸಂಕೋಲೆಗಳಿಂದ ಬಿಡಿಸಿಕೊಂಡು ಹೊರಬಂದು ಸ್ವಾತಂತ್ರ ಗಳಿಸಿಕೊಂಡ ಘಳಿಗೆ ಇದು ಎಂದು ಅಭಿಪ್ರಾಯಪಟ್ಟರು.

ಗೆಳೆಯರಾದ ಕಟ್ಟೆ ಗುರುರಾಜ್, ಜೋಗಿ ಅಂಥವರು ಬರೆಯಲು ನನ್ನ ಪ್ರೋತ್ಸಾಹಿಸಿದರು. ಎತ್ತರದಲ್ಲಿದ್ದವರು ಬರೆದಾಗ ನೆನಪು, ಅನುಭವ ಬರವಣಿಗೆಯಲ್ಲಿ ಮೂಡುತ್ತದೆ ಎನ್ನುವುದಕ್ಕಿಂತ ನಾನು ಜಾತ್ರೆಯನ್ನು ಅಪ್ಪನ ಹೆಗಲ ಮೇಲೆ ಕುಳಿತು ನೋಡುವ ಮಗುವಿನ ರೀತಿ ಬರೆಯುತ್ತಿದ್ದೇನೆ. ಆಗಲೇ ಲಂಕೇಶ್, ತೇಜಸ್ವಿ, ಚಿತ್ತಾಲರ ಒಡನಾಟ, ನೆನಪುಗಳು ಬರವಣಿಗೆಗೆ ಇಳಿದವು. ನನ್ನೊಂದಿಗೆ ಶ್ರೀಮಂತಿಕೆ ಕನ್ನಡ ಸಾಹಿತ್ಯ, ರಂಗಭೂಮಿ ಅನುಭವ, ಸಿನೆಮಾ ಹೀಗೆ ಇನೇಕ ಗ್ರಹಿಕೆ, ಅಂತಃಕರಣ ಸುತ್ತಲ ವಾತಾವರಣ ನಿರ್ಮಿಸಿಕೊಟ್ಟಿತು ಎಂದರು.

ನನ್ನ ಒಡನಾಟದಲ್ಲಿರುವ ಅನೇಕ ಮಂದಿಯ ಮುಂದೆ ನಾನು ಸಣ್ಣನವನಾಗಿರಬಾರದು ಎಂಬ ಶ್ರೀರಕ್ಷೆ ಗಟ್ಟಿ ಬರವಣಿಗೆಯನ್ನು ಸೃಷ್ಟಿಸಿದೆ. ನಾನು ಬರೆಯಬಲ್ಲನೆ, ಜನರು ಓದಬಲ್ಲರೆ ಎಂಬ ಯಾವ ಭ್ರಮೆಯೂ ಇಲ್ಲದೆ, ನಾನು ಸರಿದಾರಿಯಲ್ಲಿ ಸಾಗುತ್ತಿದ್ದೇನೆಯೇ ಎನ್ನುವುದನ್ನು ಮಾತ್ರ ಅರಿಯಲು ಬರೆಯುತ್ತಿದ್ದೇನೆ ಎಂದು ಪ್ರಕಾಶ್ ರೈ ತಿಳಿಸಿದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನಟ ಮಂಡ್ಯ ರಮೇಶ್, ಸಾಹಿತಿ ಡಾ.ಸಿ.ನಾಗಣ್ಣ, ರಂಗಕರ್ಮಿ ಕೆ.ಆರ್. ಸುಮತಿ ಅಂಕಣಗಳನ್ನು ವಾಚಿಸಿದರು. ಸಿನೆಮಾ ಪತ್ರಕರ್ತ ಜೋಗಿ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News