ಜಮಖಂಡಿ ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ್‌ ಸಿದ್ದು ನ್ಯಾಮೇಗೌಡ ಆಯ್ಕೆ

Update: 2018-10-09 14:11 GMT
ಆನಂದ್‌ ಸಿದ್ದು ನ್ಯಾಮೇಗೌಡ

ಬೆಂಗಳೂರು, ಅ.9: ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿವಂಗತ ಸಿದ್ದು ನ್ಯಾಮೇಗೌಡ ಅವರ ಪುತ್ರ ಆನಂದ್‌ರನ್ನು ಕೆಪಿಸಿಸಿ ಆಯ್ಕೆ ಮಾಡಿದೆ.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸರ್ವ ಸಮ್ಮತವಾಗಿ ಆನಂದ್‌ಸಿದ್ದು ನ್ಯಾಮೇ ಗೌಡರನ್ನೆ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಸುತ್ತೇನೆ. ರಾಜ್ಯದ ಎಲ್ಲ ನಾಯಕರು ಆ ವೇಳೆ ಹಾಜರಿರುತ್ತಾರೆ. ನನ್ನ ತಂದೆ ತಮ್ಮ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಜನಪರವಾದ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿರಲಿದೆ ಎಂದು ಕಾಂಗ್ರೆಸ್ ನಾಯಕರ ಸಭೆಯ ಬಳಿಕ ಆನಂದ್ ಸುದ್ದಿಗಾರರಿಗೆ ವಿಷಯ ತಿಳಿಸಿದರು.

ನನ್ನ ವಿರುದ್ಧ ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಇಂದಿನ ಸಭೆಯಲ್ಲಿ ಚುನಾವಣಾ ಜವಾಬ್ದಾರಿಗಳ ಬಗ್ಗೆ ಚರ್ಚೆಯಾಗಿದೆ. ಗೆಲ್ಲಲು ಅನುಸರಿಸಬೇಕಾದ ರಣತಂತ್ರ ಕುರಿತು ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ಬೂತ್ ಮತ್ತು ಬ್ಲಾಕ್ ಮಟ್ಟದ ಜವಾಬ್ದಾರಿ ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಉಪ ಚುನಾವಣೆ ಆಗಿರುವುದರಿಂದ ಹೆಚ್ಚಿನ ಜವಾಬ್ದಾರಿಯಿದೆ. ಸಚಿವರು ಮತ್ತು ಶಾಸಕರಿಗೆ ಜವಾಬ್ದಾರಿಗಳನ್ನು ನೀಡಿದ್ದು, ನಮ್ಮ ಅಭ್ಯರ್ಥಿ ಆನಂದ್ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಲೋಕಸಭೆ ಉಪ ಚುನಾವಣೆ ಅಗತ್ಯವಿರಲಿಲ್ಲ: ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಅಗತ್ಯವಿರಲಿಲ್ಲ. ಈ ಚುನಾವಣೆಯಲ್ಲಿ ಗೆದ್ದವರು ಸಂಸತ್ತಿನ ಕಂಬಗಳನ್ನು ನೋಡಿಕೊಂಡು ಬರಲು ಹೋಗಬೇಕಷ್ಟೇ. ಇದು ಸಾರ್ವಜನಿಕರ ತೆರಿಗೆ ಹಣ ಹಾಗೂ ಶ್ರಮದ ವ್ಯರ್ಥ ಅಷ್ಟೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಒಂದು ಕ್ಷೇತ್ರದಲ್ಲಿ 600 ಕೋಟಿ ರೂ.ಖರ್ಚಾಗುತ್ತದೆ. ಉಪ ಚುನಾವಣೆ ಬೇಡ ಎಂದು ನಾನು ರಾಷ್ಟ್ರಪತಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಚುನಾವಣೆ ಬೇಡ ಎಂದು ರಾಜ್ಯದ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬಾಗಲಕೋಟೆ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News