ಪೌರಕಾರ್ಮಿಕರ ಜೊತೆ ಸಿಎಂ ಸಭೆ ಯಶಸ್ವಿ: 6 ದಿನಗಳಿಂದ ನಡೆಯುತ್ತಿದ್ದ ಮುಷ್ಕರ ಅಂತ್ಯ

Update: 2018-10-09 15:18 GMT

ಮೈಸೂರು, ಅ.9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಡೆದ ಪೌರಕಾರ್ಮಿಕರ ಸಂಧಾನ ಸಭೆ ಯಶಸ್ವಿಯಾಗಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಆರು ದಿನಗಳಿಂದ ನಡೆಸುತ್ತಿದ್ದ ಪೌರಕಾಮಿರ್ಕರ ಮುಷ್ಕರ ಅಂತ್ಯಗೊಂಡಂತಾಗಿದೆ.

ವಿಧಾನಸೌದದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪೌರಕಾರ್ಮಿಕರ ಸಭೆ ನಡೆದು ಅವರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪೌರಕಾರ್ಮಿಕ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಪೌರಕಾರ್ಮಿಕರ ಮುಖಂಡರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನಿಮ್ಮ ಬೇಡಿಕೆಗಳನ್ನು ಸಚಿವ ಸಂಪುಟದ ಸಭೆಯಲ್ಲಿ ಸಹಾನೂಭೂತಿಯಿಂದ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತರಲು ಸೂಚಿಸಿದರು.

ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಪಾಲಿಕೆಯೇ ನಿರ್ವಹಿಸುವಂತೆ ಕ್ರಮ ಜರುಗಿಸಬೇಕು, ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು, ಬೆಳಗಿನ ಉಪಾಹರವನ್ನು ಇಂದಿರಾ ಕ್ಯಾಂಟೀನ್ ಮೂಲಕ ನೀಡಬೇಕು, 500 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬಂತೆ ನೇಮಕ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಇದಕ್ಕೆ ಸಮ್ಮತಿ ಸೂಚಿಸಿರುವ ಸಿಎಂ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಪೌರಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಎಂ.ನಾರಾಯಣ, ಮೈಸೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಾರ, ಮುಖಂಡರಾದ ರಾಜು, ಚಲುವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ರಾಜಶೇಖರ ಪಾಟೀಲ, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News