ದಸರಾ ಮಹೋತ್ಸವಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

Update: 2018-10-09 15:17 GMT
ಸಾಂದರ್ಭಿಕ ಚಿತ್ರ

ಮೈಸೂರು,ಅ.9: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಿದೆ ಎಂಬ ಅತಂಕ ದೂರವಾಗಿದ್ದು, ಮುಖ್ಯಮಂತ್ರಿ, ಸಚಿವರು ಜನಪ್ರತಿನಿಧಿಗಳು ದಸರಾದಲ್ಲಿ ಭಾಗವಹಿಸಬಹುದಾಗಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಸ್ಪಷ್ಟಪಡಿಸಿದೆ. ಇದರಿಂದ ಸರಕಾರ ಮತ್ತು ಜನಪ್ರತಿನಿಧಿಗಳು ನಿಟ್ಟುಸಿರು ಬಿಡುವಂತಾಗಿದೆ.

ಲೋಕಸಭಾ ಉಪಚುನಾವಣೆ ಪ್ರಕಟಗೊಂಡ ಹಿನ್ನಲೆಯಲ್ಲಿ ದಸರಾದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ನೀತಿ ಸಂಹಿತೆ ಅಡ್ಡಿಯಾಗಲಿದೆ ಎಂಬ ಆತಂಕ ಮನೆಮಾಡಿತ್ತು. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚುನಾವಣಾ ಆಯೋಗಕ್ಕೆ ಜನಪ್ರತಿನಿಧಿಗಳು ಭಾಗವಹಿಸಲು ಅನುಮತಿ ನೀಡುವಂತೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ 'ಜನಪ್ರತಿನಿಧಿಗಳು ಭಾಗವಹಿಸಬಹುದು. ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ದಸರಾಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ನಡೆಸಬಾರದು. ಚುನಾವಣಾ ಸಂಬಂಧ ಯಾವುದೇ ರಾಜಕೀಯ ಆಶ್ವಾಸನೆಗಳನ್ನು ನೀಡಬಾರದು. ಚುನಾವಣಾ ನಿಗದಿಯಾಗಿರುವ ಸ್ಥಳಗಳಲ್ಲಿ ದಸರಾಗೆ ಸಂಬಂಧ ಪಟ್ಟಂತೆ ಯಾವುದೇ ರಾಜಕಾರಣಿಗಳ ಬ್ಯಾನರ್, ಕಟೌಟ್ ಹಾಕಬಾರದು' ಎಂದು ಚುನಾವಣಾ ಆಯೋಗ ಸೂಚಿಸಿದೆ. ಹಾಗಾಗಿ ಎಂದಿನಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News