ರಾಮನಗರ ಉಪಚುನಾವಣೆ: ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ದೊರೆಯಲಿ; ಸಂಸದ ಡಿ.ಕೆ.ಸುರೇಶ್

Update: 2018-10-09 15:44 GMT

ಬೆಂಗಳೂರು, ಅ.9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವಂತೆ ನಾಯಕರಿಗೆ ತಿಳಿಸಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಮನಗರ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮನಗರದಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಆದುದರಿಂದ, ಕಾರ್ಯಕರ್ತರ ಅಭಿಪ್ರಾಯಪಡೆದು ಮುಂದುವರೆಯಿರಿ ಎಂದು ಹೇಳಿದ್ದೇನೆ. ವರಿಷ್ಠರು ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕಾರ್ಯಕರ್ತರ ಮನಸ್ಸಿನಲ್ಲಿರುವ ವಿಚಾರವನ್ನು ಸಭೆಯಲ್ಲಿ ನಾಯಕರ ಮುಂದೆ ಇಟ್ಟಿದ್ದೇವೆ. ಎರಡು, ಮೂರು ದಿನಗಳ ನಂತರ ಮತ್ತೆ ಸಭೆ ಸೇರೋಣ. ಇಲ್ಲವೇ ನಾವೇ ನಿಮಗೆ ನಿರ್ಧಾರ ತೆಗೆದುಕೊಂಡು ಹೇಳುತ್ತೇವೆಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ 69 ಸಾವಿರ ಮತಗಳು ಬಂದಿವೆ. ಹೀಗಾಗಿ ಕಾರ್ಯಕರ್ತರ ಅಹವಾಲುಗಳನ್ನು ಕೇಳಿ ಮುಂದುವರೆಯಿರಿ ಎಂದು ನಾಯಕರಲ್ಲಿ ಕೇಳಿಕೊಂಡಿದ್ದೇವೆ. ನಾನು ಕಾರ್ಯಕರ್ತರ ಪರವಾಗಿ ಇರಬೇಕು. ಹೀಗಾಗಿ ಅವರ ಮನಸ್ಸಿನಲ್ಲಿ ಇರುವುದನ್ನು ಹೇಳಿದ್ದೇನೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ಬದ್ಧವಾಗಿರುತ್ತೇನೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ನಡೆದ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಚುನಾವಣೆಯಲ್ಲಿ ಮೈತ್ರಿಗೆ ನಮ್ಮ ವಿರೋಧವಿಲ್ಲ. ಸರಕಾರದಲ್ಲಿ ಆಗುತ್ತಿರುವ ಅಸಮಾನತೆ ಬಗ್ಗೆ ವರಿಷ್ಠರ ಬಳಿ ಹೇಳಿಕೊಂಡಿದ್ದೇವೆ. ನಮ್ಮಲ್ಲೂ ಹಲವರು ಆಕಾಂಕ್ಷಿಗಳು, ಅಭ್ಯರ್ಥಿಗಳು ಇದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದರು.

ಎರಡು ಮೂರು ದಿನಗಳ ಬಳಿಕ ನಿರ್ಧಾರ ತಿಳಿಸುತ್ತೇವೆಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಆತ್ಮಾನಂದ, ನರೇಂದ್ರಸ್ವಾಮಿ ಸೇರಿದಂತೆ ಹಲವರು ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News