ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಬುಧವಾರ ಚಾಲನೆ

Update: 2018-10-10 11:44 GMT
ಸಾಂದರ್ಭಿಕ ಚಿತ್ರ

ಮೈಸೂರು,ಅ.9: ವಿಶ್ವವಿಖ್ಯಾತ ಮೈಸೂರು ದಸರಾ-2018 ಅನ್ನು ಅ.10ರ ಬುಧವಾರ ಚಾಮುಂಡಿ ಬೆಟ್ಟದಲ್ಲಿ ಇನ್ಫೋಸಿಸ್ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

ಬುಧವಾರ ಬೆಳಿಗ್ಗೆ 7.05 ರಿಂದ 07.35 ರ ವರೆಗೆ ಸಲ್ಲುವ ತುಲಾ ಲಗ್ನದಲ್ಲಿ ದಲ್ಲಿ ದಸರಾ ಮಹೋತ್ಸವವು ಉದ್ಘಾಟನೆಗೊಳ್ಳಲಿದ್ದು, ನಂತರ ವಿವಿಧ ಕಾರ್ಯಕ್ರಮಗಳಿಗೆ ಮೈಸೂರು ನಗರದಲ್ಲಿ ಚಾಲನೆ ನೀಡಲಾಗುವುದು.

ಮೈಸೂರು ದಸರಾ ಹಬ್ಬದ ಒಂದು ಪ್ರಮುಖ ಕಾರ್ಯಕ್ರಮವಾದ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಬೆಳಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಚಲನಚಿತ್ರ ಕಲಾವಿದ ನಿಖಿಲ್ ಕುಮಾರಸ್ವಾಮಿ, ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಪಾರುಲ್ ಯಾದವ್ ಹಾಗೂ ಚಲನಚಿತ್ರ ನಿರ್ದೇಶಕ ಸತ್ಯ ಪ್ರಕಾಶ್, ರಿಷಬ್ ಶೆಟ್ಟಿ ಆಗಮಿಸಲಿದ್ದಾರೆ.

ಉದ್ಘಾಟನೆಯಲ್ಲಿ “ಒಂದಲ್ಲಾ ಎರಡಲ್ಲಾ” ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಚಲನಚಿತ್ರೋತ್ಸವ ಉದ್ಘಾಟನೆ ನಂತರ ಡಿ. ಸತ್ಯಪ್ರಕಾಶ್ ನಿರ್ದೇಶನದ ಮನೋರಂಜಿತ, ಸೈದ್ಧಾಂತಿಕ ನೆಲಗಟ್ಟಿನಲ್ಲಿ ದಿನನಿತ್ಯ ನಡೆಯುವ ಜೀವನ ಶೈಲಿ ಹೊಂದಿರುವ “ಒಂದಲ್ಲಾ ಎರಡಲ್ಲಾ” ಚಿತ್ರ ಕಲಾಮಂದಿರದಲ್ಲಿ ಪ್ರದರ್ಶನವಾಗಲಿದೆ.

ಮೈಸೂರು ದಸರಾ ಚಲನಚಿತ್ರೋತ್ಸವ ಮತ್ತು ಕರ್ನಾಟಕ ಚಲನಚಿತ್ರ ಆಕಾಡೆಮಿ ವತಿಯಿಂದ ಅ.13,14ರ ಎರಡು ದಿನಗಳ ಕಾರ್ಯಗಾರವನ್ನು ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಕಿರುಚಿತ್ರ ತಯಾರಿಕೆ, ನಿರ್ಮಾಣ, ನಿರ್ದೇಶನ ಕುರಿತು ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಶುಲ್ಕ 400ರೂ. ಹಾಗೂ ವಿದ್ಯಾರ್ಥಿಗಳಿಗೆ ಶುಲ್ಕ 300ರೂ.ಗಳು. ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳಿಗೆ ದಸರಾ ಚಲನಚಿತ್ರ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಮೈಸೂರು ದಸರಾ ಚಲನಚಿತ್ರೋತ್ಸವ ಮತ್ತು ಕರ್ನಾಟಕ ಚಲನಚಿತ್ರ ಆಕಾಡೆಮಿ ವತಿಯಿಂದ ಈ ಬಾರಿ ಕಿರುಚಿತ್ರ ಚಲನಚಿತ್ರ ಸ್ಪರ್ಧೆಗೆ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ 12-10-2018 ಸಂಜೆ 6 ಭಾಗವಹಿಸಲು ಅವಕಾಶ ನೀಡಲಾಗಿದೆ.

ದಸರಾ ಮಹೋತ್ಸವ ಅಂಗವಾಗಿ ಅ.10 ರಿಂದ 19 ರವರೆಗೆ ಆಹಾರ ಮೇಳವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತ್ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಅ.10 ರಂದು ಮಧ್ಯಾಹ್ನ 2 ಗಂಟೆಗೆ ಆಹಾರ ಮೇಳವನ್ನು ಆಹಾರ ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಝಮೀರ್ ಅಹ್ಮದ್ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಉಪಸ್ಥಿತರಿರಲಿದ್ದಾರೆ ಎಂದು ಮುಡಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶಿವಣ್ಣ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 98 ಮಳಿಗೆಗಳನ್ನು ಮತ್ತು ಲಲಿತ್ ಮಹಲ್ ಹೋಟೆಲ್ ಪಕ್ಕದ ಮೂಡಾ ಮೈದಾನದಲ್ಲಿ 75 ಮಳಿಗೆಗಳನ್ನು ನಿರ್ಮಿಸಲಾಗಿದೆ. ಬುಡಕಟ್ಟು, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಹಾರ ಪದ್ಧತಿಯನ್ನು ಆಹಾರ ಮೇಳದಲ್ಲಿ ಸವಿಯಬಹುದಾಗಿದೆ ಎಂದರು. ಪಲಪುಷ್ಪ ಪ್ರದರ್ಶನ ಅ.10ರಂದು 21ರವರೆಗೆ ಆಯೋಜನೆಗೊಳ್ಳಲಿದೆ. ಅ.10ರಂದು ಸಂಜೆ 4.30ಕ್ಕೆ ತೋಟಗಾರಿಕೆ ಸಚಿವ ಎಂ.ಸಿ.ಮನಗುಳಿ ಅವರಿಂದ ಉದ್ಘಾಟನೆಗೊಳ್ಳಲಿದೆ. 

ಹೊಸದಿಲ್ಲಿ ಲೋಟಸ್ ಟೆಂಪಲ್ ಮಾದರಿ: ಫಲಪುಷ್ಪ ಪ್ರದರ್ಶನದಲ್ಲಿ 2.50 ಲಕ್ಷ ಶ್ವೇತ ಗುಲಾಬಿ ಮತ್ತು ಅಸ್ಪರಾಗಸ್ ಹೂವುಗಳಿಂದ ನಿರ್ಮಾಣಗೊಳ್ಳಲಿರುವ ಲೋಟಸ್ ಟೆಂಪಲ್ ಮಾದರಿ ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದೆ. ಇದು 18 ಅಡಿ ಎತ್ತರ, 40 ಅಡಿ ಸುತ್ತಳತೆಯಲ್ಲಿರುತ್ತದೆ. ಅರಮನೆ ಪ್ರವೇಶ ದ್ವಾರದಿಂದ ಹೊರಬರುತ್ತಿರುವ ಆನೆ ಮಾದರಿ ಕೂಡ ಇರಲಿದೆ. ಇದಲ್ಲದೆ, ಮಕ್ಕಳಿಗಾಗಿ ಕಿಡ್ಸ್ ಕಾರ್ಟೂನ್ ಪಾರ್ಕ್, ಇಕೆಬಾನ, ಕಟ್ ಫ್ಲವರ್, ಡ್ರೈ ಫ್ಲವರ್, ಟೆರೋರಿಯಮ್ ಗಾರ್ಡನ್, ಮಿನಿಯೇಟರ್, ಪಾಟರಿ ಗಾರ್ಡನ್ ಪರಿಕಲ್ಪನೆಗಳನ್ನು ನವೀನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ನೂತನವಾಗಿ 7.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗಾಜಿನ ಮನೆಯನ್ನು ಅ.10ರಂದು ಸಂಜೆ 4ಕ್ಕೆ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಉಪಸ್ಥಿತರಿರುವರು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದು, ವಿದ್ಯುತ್ ದೀಪಗಳನ್ನು ಲೋಕೋಪಯೋಗಿ ಹಾಗೂ ಇಂಧನ ಸಚಿವ ಎಚ್.ಡಿ.ರೇವಣ್ಣ ಉದ್ಘಾಟನೆ ಮಾಡಲಿದ್ದಾರೆ. ಅರಮನೆ ಆವರಣದಲ್ಲಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಅ.10 ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಗೀತಾಸಕ್ತರ ಮನ ತಣಿಸಲು ವಿವಿಧ ರೀತಿಯ ಕಾರ್ಯಕ್ರಮಗಳು ಅ.17 ರವರೆಗೂ ಜರುಗಲಿದೆ. ಹಾಗೆಯೇ ದಸರಾ ಪ್ರಯುಕ್ತ ರಂಗಾಯಣದ ವತಿಯಿಂದ 'ನವರಾತ್ರಿ ರಂಗೋತ್ಸವ' ಹಾಗೂ ಸಾಧಕರ ಸನ್ಮಾನವನ್ನು ಏರ್ಪಡಿಸಲಾಗಿದೆ.

ಅ.10 ರಿಂದ 18ರವರೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯು ಅ.10ರ ಸಂಜೆ 6 ಗಂಟೆಗೆ ಭೂಮಿ ಗೀತಾದಲ್ಲಿ ಸಚಿವೆ ಜಯಮಾಲ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿಂತಕ ಮೂಡ್ನಾಕುಡು ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಇರಲಿದ್ದಾರೆ. ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅಧ್ಯಕ್ಷತೆ ವಹಿಸಲಿದ್ದಾರೆ.

ದಸರಾದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದು, ದಸರಾ ಕಾರ್ಯಕ್ರಮಗಳಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ, ಮುಜರಾಯಿ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಹಲವಾರು ಸಚಿವರುಗಳು ಪಾಲ್ಗೊಳ್ಳಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News