ದಾವಣಗೆರೆ: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‍ ವಿನೂತನ ಪ್ರತಿಭಟನೆ

Update: 2018-10-09 18:01 GMT

ದಾವಣಗೆರೆ,ಅ.9: ಇಂಧನ ಬೆಲೆಗಳ ಏರಿಕೆ ಖಂಡಿಸಿ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಎಳ್ಳು-ನೀರು ಬಿಡುವ ಮೂಲಕ ಜಿಲ್ಲಾ ಕಾಂಗ್ರೆಸ್‍ನಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಪಾಲಿಕೆಯ ಆವರಣದ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಪ್ರಧಾನಮಂತ್ರಿ ಉದ್ಯಮಿಗಳ ಪರವಾಗಿ ಯೋಜನೆಗಳ ಜಾರಿಗೆ ತರುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್ ಶೋಭಾ ಪಲ್ಲಾಗಟ್ಟೆ ಮತ್ತು ಉಪ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿತ್ತು. ಆದರೆ, ಈ ಭರವಸೆಗಳು ಈಡೇರಿಸದೇ ಮೋದಿ ನೇತೃತ್ವದ ಸರ್ಕಾರ ಜನರಿಗೆ ಎಳ್ಳು ನೀರು ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಪಿತೃಪಕ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಳ್ಳು ನೀರು ಬಿಡುವ ಮೂಲಕ ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿ ಭಾರತೀಯರ ಖಾತೆಗೆ ನರೇಂದ್ರ ಮೋದಿ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, 15 ಪೈಸೆ ಸಹ ಜಮೆಯಾಗಿಲ್ಲ. ಜನರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದ್ದ ಮೋದಿ ಅವರು ರಫೇಲ್ ಹಗರಣದ ಮೂಲಕ ಬಿಜೆಪಿ ಖಾತೆಗೆ 41 ಸಾವಿರ ಕೋಟಿ ಹಣ ಜಮೆ ಮಾಡಿಕೊಂಡು ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಬಿಜೆಪಿ ಅಭ್ಯರ್ಥಿಗಳಿಗೆ ಕೋಟ್ಯಾಂತರ ರೂಪಾಯಿ ಕೊಡುವ ಮೂಲಕ ಗೆಲ್ಲಿಸಿಕೊಂಡು ಬರುತ್ತಿದ್ದಾರೆಂದು ಆರೋಪಿಸಿದರು. 

ತಕ್ಷಣವೇ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಕಡಿಮೆ ಮಾಡುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಸೈಯದ್ ಸೈಪುಲ್ಲಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ಹಾಲೇಶ್, ಕೆ.ಜಿ.ಶಿವಕುಮಾರ್, ಎ.ನಾಗರಾಜ್, ದಕ್ಷಿಣ ವಲಯ ಬ್ಲಾಕ್ ಕಾಂಗೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ತಿಪ್ಪಣ್ಣ, ಹೆಚ್.ಜಯಣ್ಣ, ಭಾಸ್ಕರ್ ಬನಿಯನ್, ಮಹಿಳಾ ಘಟಕದ ವಿಜಯ ಅಕ್ಕಿ, ದ್ರಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಶುಭಮಂಗಳ, ಇಮ್ತಿಯಾಜ್, ಅಲಿ ರಹಮತ್, ಮೈನುದ್ದೀನ್, ಸದ್ದಾಂ, ಯುವರಾಜ್, ಮುಜಾಹಿದ್, ಬಸವರಾಜ್ ಮತ್ತಿತರರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News