ಶೋಷಿತ ವರ್ಗಕ್ಕೆ ರಾಜಕೀಯ ಮಾನ್ಯತೆ ನೀಡಿದವರು ಕಾನ್ಷಿರಾಂ: ಬಿಎಸ್ಪಿ ಮುಖಂಡ ಕೆ.ಟಿ.ರಾಧಕೃಷ್ಣ

Update: 2018-10-09 18:14 GMT

ಚಿಕ್ಕಮಗಳೂರು, ಅ.9: ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಕಾನ್ಷಿರಾಂ ಅವರು ಶೋಷಿತ ವರ್ಗಕ್ಕೆ ರಾಜಕೀಯ ಮಾನ್ಯತೆಯನ್ನು ತಂದುಕೊಟ್ಟವರು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಹೇಳಿದರು. 

ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಸಾಹೇಬ್ ಕಾನ್ಷಿರಾಂ ಅವರ 5ನೇ ವರ್ಷದ ಪರಿನಿಬ್ಬಣದ ಅಂಗವಾಗಿ ಮಂಗಳವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಶೋಷಿತ ವರ್ಗದವರು ರಾಜಕೀಯದಲ್ಲಿ ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದರೆ ಅದಕ್ಕೆ ಕಾನ್ಷಿರಾಂ ಅವರು ಕಾರಣ ಎಂದ ಅವರು, ಕಾನ್ಷಿರಾಂ ಅವರ ರಾಜಕೀಯ ನೀತಿ ಬಿಟ್ಟು ರಾಜಕೀಯಕ್ಕೆ ಉಳಿಗಾಲವಿಲ್ಲ ಎಂದು ತಿಳಿಸಿದರು.

ಬಸವ, ಬುದ್ಧ ಅವರಂತ ಮಹಾನ್ ವ್ಯಕ್ತಿಗಳು ಲಿಂಗಭೇದ, ಜಾತಿ ಭಾವನೆ ತೊಡೆದು ಹಾಕಲು ಹೋರಾಟ ಮಾಡಿದರು. ಕಾನ್ಷಿರಾಂ ಅವರು, ಲಿಂಗಭೇದ ಜಾತಿ ಭಾವನೆ ಹೊರತಾದ ರಾಜಕೀಯಕ್ಕೆ ಮುನ್ನುಡಿ ಬರೆದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಬಲಿಷ್ಟ ಸಂವಿಧಾನ ನೀಡಿದರು. ಕಾನ್ಷಿರಾಂ ಅವರು, ಶೋಷಿತರನ್ನು, ಶ್ರಮಜೀವಿಗಳನ್ನು ಒಟ್ಟುಗೂಡಿಸಿ ಶೋಷಿತರನ್ನು ಅಧಿಕಾರಕ್ಕೆ ತರಲು ಬಿಎಸ್ಪಿ ಪಕ್ಷ ಸಂಸ್ಥಾಪನೆ ಮಾಡಿದರು ಎಂದು ತಿಳಿಸಿದರು.

ಇಂದು ಯಾವುದೇ ಪಕ್ಷದಲ್ಲಿ ಶೋಷಿತರು ಅಧಿಕಾರ ಹೊಂದಿದ್ದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕಾನ್ಷಿರಾಂ ಅವರು ಕಾರಣ. ಇಬ್ಬರು ಮಹನೀಯರು ಇರದಿದ್ದರೆ ಶೋಷಿತರಿಗೆ ರಾಜಕೀಯ ಮಾನ್ಯತೆಯೇ ಇರುತ್ತಿರಲಿಲ್ಲ ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯ ಸಮಿತಿ ಸದಸ್ಯ ಜಿ.ಕೆ. ಬಸವರಾಜ್ ಮಾತನಾಡಿ, ಮನುಸ್ಮೃತಿ ಆಡಳಿತದ ಅಂದಿನ ಕಾಲದಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ನೀಡುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತರಿಗೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ನಂತರ ಶೇ.85ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರನ್ನು ಒಟ್ಟುಗೂಡಿಸಿ ಶೋಷಿತ ವರ್ಗಕ್ಕೆ ರಾಜಕೀಯ ಮಾನ್ಯತೆ ತಂದುಕೊಟ್ಟರು ಎಂದರು.

ಬಹಿರಂಗ ಸಭೆಯಲ್ಲಿ ಬಿಎಸ್‍ಪಿ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಉಪಾಧ್ಯಕ್ಷೆ ರೇಖಾ, ಪರಮೇಶ್, ಗಂಗಾಧರ್ ಅಂಜದ್ ಸೇರಿದಂತೆ ಅನೇಕರು ಇದ್ದರು. ಬಹಿರಂಗ ಸಭೆಗೂ ಮುನ್ನಾ ನಗರದ ಪ್ರಮುಖ ರಸ್ತೆಗಳಲ್ಲಿ ಬಿಎಸ್‍ಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸುವ ಮೂಲಕ ಕಾನ್ಷಿರಾಂ ಅವರ ಜೀವನ ಸಂದೇಶ ಸಾರುವ ಕರಪತ್ರಗಳನ್ನು ಹಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News