ಯುವಜನತೆಯಲ್ಲಿ ವೈಚಾರಿಕತೆ ಬೆಳೆಯಬೇಕಾಗಿದೆ

Update: 2018-10-09 18:33 GMT

ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಗೆಯಲ್ಲಿ ಕ್ರಾಂತಿಗಳು ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಅಂಗೈಯಲ್ಲೇ ಅರಮನೆ ಕಟ್ಟಿಸಿಕೊಂಡಿದೆ. ಎಲ್ಲಾ ಬಗೆಯ ಶಿಕ್ಷಣ, ಮಾಹಿತಿ, ಜ್ಞಾನ ಶಾಖೆಗಳು ಈ ಹಿಂದಿಗಿಂತ ಇಂದು ಹೆಚ್ಚು ಸುಲಭವಾಗಿ, ಸರಳವಾಗಿ ಕೈಗೆಟುಕುತ್ತಿದೆ. ಆದರೆ, ಎಲ್ಲಾ ಬಗೆಯ ಶಿಕ್ಷಣವನ್ನು ತನ್ನದಾಗಿಸಿಕೊಂಡ ವಿದ್ಯಾವಂತರೆನಿಸಿಕೊಂಡ ಯುವಜನರು ಕೇವಲ ಅಕ್ಷರಸ್ಥರಾಗುತ್ತಿದ್ದಾರೆಯೇ? ಅಥವಾ ನಿಜಾರ್ಥದಲ್ಲಿ ವಿಚಾರವಂತರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.

ಯಾವುದೇ ಶಿಕ್ಷಣಗಳು ನಾವು ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಕನಿಷ್ಠ ಪ್ರೇರಣೆಯನ್ನೂ ನೀಡದಿದ್ದರೆ ಅವುಗಳೆಲ್ಲವೂ ವ್ಯರ್ಥವೆಂದೇ ಅನಿಸುವುದಿಲ್ಲವೇ?. ವಿದ್ಯೆಯಿಂದ ನಾವು ಸ್ವತಂತ್ರರಾಗಬೇಕು, ಅಂದರೆ ಸ್ವಚಿಂತನೆ, ಸ್ವಯಂ ಸಾಮರ್ಥ್ಯ, ಸ್ವಾಭಿಮಾನದ ಕಿಚ್ಚಿನೊಂದಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು. ಆದರೆ ಇಂದಿಗೂ ಯಾರದೋ ಯೋಚನೆ, ಯೋಜನೆ, ಸ್ವಾರ್ಥಕ್ಕೆ ಬಲಿಯಾಗುತ್ತಿರುವುದು ಮತ್ತು ತರ್ಕಬದ್ಧವಲ್ಲದ, ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಯಾವುದೇ ರೀತಿಯಲ್ಲೂ ತಮ್ಮ ಏಳಿಗೆಗೆ ಪೂರಕವಾಗಿಲ್ಲದ ಅನೇಕ ಕಂದಾಚಾರಗಳಿಗೆ ಬಲಿಯಾಗುತ್ತಿರುವುದನ್ನು ಕಂಡಾಗ ನಮ್ಮ ಯುವಜನತೆ ಸ್ವಯಂ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ? ವಿದ್ಯಾವಂತರಾಗಿಯೂ ವಿಚಾರಶೂನ್ಯರಾಗುತ್ತಿದ್ದಾರೆಯೇ ಎನ್ನುವ ಸಂದೇಹ ಸಹಜವಾಗಿಯೇ ಮೂಡುತ್ತಿದೆ.

ನಿಜಕ್ಕೂ ನಮ್ಮ ಯುವಜನರಲ್ಲೊಂದು ಪ್ರಜ್ಞೆಯಿದೆ, ಅದ್ಭುತ ಶಕ್ತಿ ಇದೆ. ಯಾವುದು ಒಳಿತು, ಯಾವುದು ಕೆಡುಕು ಎಂದು ಚಿಂತಿಸುವ ಸಾಮರ್ಥ್ಯವೂ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಾಗಲಿ, ಯಾವುದನ್ನೇ ಒಪ್ಪಿಸ್ವೀಕರಿಸುವ ಸಮಯದಲ್ಲಾಗಲಿ, ಯಾವುದನ್ನಾದರೂ ಅದು ನಂಬಿಕೆ ಎಂದು ಒಪ್ಪಿಆಚರಿಸುವ ಸಂದರ್ಭದಲ್ಲೇ ಆಗಲಿ ಯುವ ಜನತೆ ತಮ್ಮ ವಿದ್ಯಾವಂತಿಕೆಯ ಜತೆಗೆ ವಿಚಾರವಂತಿಕೆಯನ್ನು ಉಪಯೋಗಿಸಿದರೆ ಅವರಿಗೂ, ಅವರ ಮನೆಗೂ ಜತೆಗೆ ಸಮಾಜಕ್ಕೂ ಒಳಿತಾಗುತ್ತದೆ. ಯಾಕೆಂದರೆ ವಿದ್ಯಾವಂತರನ್ನು ಬುದ್ಧಿವಂತರು, ಅನುಭವವುಳ್ಳವರು, ಜ್ಞಾನವುಳ್ಳವರು ಎಂದು ಮನೆ, ಸಮಾಜ ನಂಬಿರುವುದರಿಂದ ಅವರ ಮಾತು ಮತ್ತು ವಿಚಾರಧಾರೆಗೆ ಮಹತ್ವವಿದೆ. ಆದ್ದರಿಂದ ವಿದ್ಯಾವಂತ ಯುವಜನರೇ ವಿಚಾರಶೂನ್ಯರಾದರೆ ಅದು ಇಡೀ ಕುಟುಂಬದ ಮತ್ತು ಸಮಾಜದ ಅವನತಿಗೆ ಕಾರಣವಾಗುತ್ತದೆ. ಇಂದು ವಿದ್ಯಾವಂತ ಯುವಜನತೆ ವೈಚಾರಿಕವಾದ ನೆಲೆಗಟ್ಟಿನಲ್ಲಿ ಮತ್ತು ವೈಜ್ಞಾನಿಕವಾದ ದೃಷ್ಟಿಕೋನದಲ್ಲಿ ಚಿಂತಿಸಬೇಕಾದ ತುರ್ತು ಅಗತ್ಯವಿರುವುದು ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಆಚರಿಸುವ ಸಂದರ್ಭದಲ್ಲಿ. ಯಾಕೆಂದರೆ ಇವೆಲ್ಲವೂ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಕೊಂಡು ಬಂದಿರುವುದರಿಂದ ಮತ್ತು ನಮ್ಮ ಬದುಕಿನ ಬಹುಪಾಲು ಈ ಆಚರಣೆಗಳಿಗಾಗಿ ನಾನಾ ವಿಧದಲ್ಲಿ ವ್ಯಯವಾಗುತ್ತಿರುವುದರಿಂದ ಇಲ್ಲಿ ಯುಜನತೆಯ ವೈಚಾರಿಕತೆ ಅತ್ಯಂತ ಮಹತ್ವ ಪಡೆಯುತ್ತದೆ.

 ಉದಾಹರಣೆಗೆ ತುಳುನಾಡಿನ ಬಹುತೇಕ ಆಚರಣೆಗಳನ್ನೇ ಗಮನಿಸೋಣ. ತುಳುನಾಡಿನ ವಾರ್ಷಿಕ ಆವರ್ತನದ ಆಚರಣೆಗಳು, ನಾನಾ ಆರಾಧನೆಗಳು, ರಂಗಪ್ರಭೇದದ ಆಚರಣೆಗಳ ಸಹಿತ ಹುಟ್ಟಿನಿಂದ ಸಾಯುವವರೆಗೂ ಕೆಲವೊಂದು ಸಾಂಪ್ರದಾಯಿಕ ಕಟ್ಟುಕಟ್ಟಳೆಗಳಿವೆೆ. ಇವೆಲ್ಲವೂ ನಮ್ಮ ಹಿರಿಯರು ತಮ್ಮ ಜೀವನ ವಿಧಾನದಲ್ಲಿ ನಿತ್ಯ ಅನುಸರಿಸಿಕೊಂಡ ಬಂದ ಚಟುವಟಿಕೆಗಳು. ಇವೇ ಮುಂದೆ ಅಭ್ಯಾಸಗಳಾಗಿ, ಬದುಕಿನ ಅವಿಭಾಜ್ಯ ಅಂಗಗಳಾಗಿ, ನಂತರ ಸಂಪ್ರದಾಯಗಳಾಗಿ, ಆಚರಣೆಯ ರೂಪ ತಾಳಿದೆ ವಿನಃ ಇವುಗಳು ದೈವದೇವರು ವಿಧಿಸಿದ ನಿಯಮಗಳೇನಲ್ಲ. ಈ ಆಚರಣೆಗಳೆಲ್ಲವೂ ಹುಟ್ಟುವುದಕ್ಕೆ ನಂಬಿಕೆಗಳೇ ಕಾರಣ ಮತ್ತು ನಂಬಿಕೆಗಳ ಕ್ರಿಯಾರೂಪವೇ ಈ ಆಚರಣೆಗಳು. ಹಾಗೆಂದು ಯಾವುದೋ ಒಂದು ಕಾಲಘಟ್ಟದಲ್ಲಿ, ಯಾವುದೋ ಉದ್ದೇಶಕ್ಕೆ ಈ ಆಚರಣೆಗಳೆಲ್ಲ ಅಸ್ತಿತ್ವಕ್ಕೆ ಬಂತು ಎಂಬ ಒಂದೇ ಕಾರಣಕ್ಕೆ ಈ ಎಲ್ಲಾ ಆಚರಣೆಗಳನ್ನು ಇಂದು ಯಥಾವತ್ತಾಗಿ ಆಚರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ, ಹಾಗೆಂದು ಇವೆಲ್ಲವೂ ಮೂಢನಂಬಿಕೆಯೆಂದು ತಿರಸ್ಕರಿಸುವುದರಲ್ಲಿಯೂ ಅರ್ಥ ಇಲ್ಲ.

ನಮ್ಮ ಬದುಕಿಗೆ ಅರ್ಥ ನೀಡುವ, ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ತೆರೆದಿಡುವ, ಮನಸ್ಸು ದೇಹಕ್ಕೆ ಮುದನೀಡುವ ಆಚರಣೆಗಳೆಲ್ಲವನ್ನೂ ಆಚರಿಸಬೇಕು. ಆದರೆ ಯಾವುದೇ ಆಚರಣೆಗಳನ್ನಾದರೂ ಏಕಾಏಕಿ ನಂಬಿ ಆಚರಿಸುವ ಮುಂಚೆ-ನಂಬದೆ ತಿರಸ್ಕರಿಸುವ ಮುಂಚೆ ಒಂದು ಚಿಕಿತ್ಸಕ ದೃಷ್ಟಿಯಿಂದ, ತರ್ಕಬದ್ಧವಾದ ಯೋಚನೆಯಿಂದ ವಿಮರ್ಶಿಸಿ ತೀರ್ಮಾನಿಸಬೇಕು. ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ತಿರಸ್ಕರಿಸುವಲ್ಲಿ ಅಗತ್ಯವಾದ ವೈಚಾರಿಕ ಪ್ರಜ್ಞೆಯನ್ನು ಯುವಜನರು ಬೆಳೆಸಿಕೊಳ್ಳಬೇಕು. ತುಳುನಾಡಿನ ಬಹುತೇಕ ವಾರ್ಷಿಕ ಆವರ್ತನಗಳ ಹಿಂದಿರುವುದು ಭೂಮಿ ಪೂಜೆ, ಅರ್ಥಾತ್ ಪ್ರಕೃತಿ ಪೂಜೆ. ಎಲ್ಲವೂ ಪ್ರಕೃತಿಯಲ್ಲಿ ದೇವರನ್ನು ಕಂಡುಕೊಂಡ ವಿಧಾನಗಳು. ಆದರೆ ಕಾಲಕ್ರಮೇಣ ಈ ಆಚರಣೆಗಳೆಲ್ಲವೂ ವೈದಿಕತೆ, ಆಧುನಿಕತೆಯ ಪ್ರಭಾವಕ್ಕೊಳಗಾಗಿ, ಆಡಂಬರದ ಆಚರಣೆಗಳಾಗಿ ರೂಪಾಂತರಗೊಂಡಿರುವುದು, ಇದರಿಂದಾಗಿ ದ್ರಾವಿಡ ಮೂಲದ ಈ ಆಚರಣೆಗಳೆಲ್ಲವೂ ತನ್ನ ಮೂಲಸತ್ವವನ್ನು ಕಳೆದುಕೊಂಡಿರುವುದು ಸತ್ಯ. ಇಲ್ಲಿ ಇಂತಹ ಆಚರಣೆಗಳ ಹಿಂದಿರುವ ಮೂಲವನ್ನು ಅರಿಯುವಲ್ಲಿ, ಅರಿತು ಆಚರಿಸುವಲ್ಲಿ ಯುವಜನತೆ ವೈಚಾರಿಕವಾಗಿ ಚಿಂತಿಸದಿದ್ದರೆ ಇಂತಹ ಆಚರಣೆಗಳಿಂದ ಮನುಕುಲಕ್ಕೆ ನಷ್ಟವೇ ಹೊರತು ಲಾಭವೇನಿಲ್ಲ. ಪ್ರಕೃತಿ ಪೂಜೆಯಾಗಿದ್ದ ಅನೇಕ ಆಚರಣೆಗಳು ಇಂದು ಪ್ರಕೃತಿಯನ್ನೇ ನಾಶ ಮಾಡಿ ಆಚರಿಸಲ್ಪಡುತ್ತಿರುವುದು ನಮ್ಮ ವಿಚಾರಶೂನ್ಯತೆಯ ಸಂಕೇತವೇ ಹೊರತು ಅಭಿವೃದ್ಧಿಯ ದ್ಯೋತಕವಲ್ಲ. ಯಾವುದೇ ಆಚರಣೆಗಳಿರಲಿ, ಅದು ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ ನೀಡುವುದಾದರೆ, ದೈಹಿಕವಾಗಿ ಬಲಪಡಿಸುವುದಾದರೆ, ಬೌದ್ಧಿಕವಾಗಿ ಎತ್ತರಿಸುವುದಾದರೆ, ಆರ್ಥಿಕವಾಗಿ ಸಬಲೀಕರಣವಾಗುವುದಿದ್ದರೆ, ಸಾಮಾಜಿಕವಾಗಿ ಹಿತಕಾರಿಯಾಗಿದ್ದರೆ ಅವೆಲ್ಲವನ್ನೂ ಆಚರಿಸುವುದು ತಪ್ಪಲ್ಲ.

ಆದರೆ ಅದು ಹಿರಿಯರ ಕಾಲದಿಂದ ಬಂದದ್ದು, ಅದು ನಮ್ಮ ಧರ್ಮ, ಅದು ನಮ್ಮ ಸಂಸ್ಕೃತಿ, ಆಚರಿಸದಿದ್ದರೆ ದೈವದೇವರು ಮುನಿಸಿಕೊಂಡಾರು ಎಂಬಿತ್ಯಾದಿ ಭ್ರಮೆಯಿಂದ ಮುಳುಗಿ ಯಾವುದೇ ಆಚರಣೆಯನ್ನು ಆಚರಿಸಿದರೂ ಅದನ್ನು ಮೂಢನಂಬಿಕೆ ಅಥವಾ ನಮ್ಮ ಮೇಲೆ ಹೇರಲ್ಪಟ್ಟ ನಂಬಿಕೆ ಎನ್ನದೇ ವಿಧಿಯಿಲ್ಲ. ಯಾವುದೇ ಆಚರಣೆಗಳು ನಮಗೆ ನೆಮ್ಮದಿ, ಖುಷಿ ಕೊಟ್ಟರಷ್ಟೇ ಸಾಲದು, ಅದು ಇತರರಿಗೂ ಸಂತಸ ಸಂಭ್ರಮವಾಗಬೇಕು. ನಮಗೆ ಮತ್ತು ಸಮಸ್ತ ಜೀವಸಂಕುಲಕ್ಕೆ ಒಳಿತಾಗುವ ಆಚರಣೆಗಳನ್ನಷ್ಟೇ ನಂಬಿ ಆಚರಿಸುವಲ್ಲಿ ಯುವಜನತೆಯ ವೈಚಾರಿಕ ಚಿಂತನೆ ಹೆಚ್ಚು ಬಳಕೆಯಾಗಬೇಕು. ತುಳುನಾಡಿನ ಬಹುತೇಕ ಆಚರಣೆಗಳು ಮೂಲನಂಬಿಕೆಗಳ ಹಿನ್ನೆಲೆವುಳ್ಳವುಗಳೇ. ಆದರೆ ಆ ಆಚರಣೆಗಳೆಲ್ಲದರ ಹಿಂದಿರುವ ಕಟ್ಟುಪಾಡುಗಳು, ಮಡಿಮೈಲಿಗೆಗಳು, ವಿಧಿನಿಷೇಧಗಳು, ಜಾತಕ ಸೂತಕಗಳೆಲ್ಲವೂ ಮೂಢನಂಬಿಕೆಗಳೇ. ಇಂದಿಗೂ ಬಹುತೇಕ ಆಚರಣೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಿಸುತ್ತಿವೆ. ಅನೇಕ ಆಚರಣೆಗಳಲ್ಲಿ ದೈಹಿಕ ದಂಡನೆ, ನರಬಲಿ, ಪ್ರಾಣಿಹಿಂಸೆಯಂತಹ ಅಮಾನವೀಯತೆ ಮೇಳೈಯಿಸುತ್ತಿದೆ.

ಕೆಲವು ಆಚರಣೆಗಳ ಹೆಸರಲ್ಲಿ ವ್ಯಯಿಸಲ್ಪಡುವ ಸಮಯ, ಹಣ ಪೋಲಾಗಿ ಬಡವರನ್ನು ಮತ್ತೆ ಬಡತನಕ್ಕೆ ತಳ್ಳುತ್ತಿದೆ. ಅನೇಕ ಆಚರಣೆಗಳಲ್ಲಿ ನೆಲ, ಜಲ, ಗಾಳಿ, ಪರಿಸರ ನಾಶವಾಗಿ ಮಾನವಸಹಿತ ಸಮಸ್ತ ಜೀವಿಸಂಕುಲದ ವಿನಾಶಕ್ಕೆ ಕಾರಣವಾಗುತ್ತಿದೆ. ಇಂದಿಗೂ ಕೆಲವೊಂದು ಆಚರಣೆಗಳಲ್ಲಿ ವರ್ಣಾಶ್ರಮ ಪದ್ಧತಿಯೇ ಮುನ್ನೆಲೆಗೆ ಬರುತ್ತಿರುವುದರಿಂದ ಕೆಲಜಾತಿ, ಸಮುದಾಯದವರನ್ನು ಶೋಷಿಸಲಾಗುತ್ತಿದ್ದು ಅಸಮಾನತೆ, ಅಸ್ಪಶ್ಯತೆ ತಾಂಡವವಾಡುತ್ತಿದೆ. ಮಡಿಮೈಲಿಗೆ, ವಿಧಿನಿಷೇಧ, ಸೂತಕ, ಶುದ್ಧ ಅಶುದ್ಧಗಳ ಹೆಸರಿನಲ್ಲಿ ಬಹುತೇಕ ಆಚರಣೆಗಳಲ್ಲಿ ನಮ್ಮ ತಾಯಂದಿರನ್ನು, ಸಹೋದರಿಯರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಮೂಲಕ ಅಮಾನುಷವಾಗಿ ವರ್ತಿಸಲಾಗುತ್ತಿದೆ. ಒಂದು ಸದುದ್ದೇಶಕ್ಕಾಗಿ ಆಚರಿಸಲ್ಪಡುವ ಯಾವುದೇ ಆಚರಣೆಗಳ ಹಿಂದೆ ಇಂದಿಗೂ ಅಂಟಿಕೊಂಡಿರುವ ಕೆಟ್ಟ ಕಟ್ಟುಪಾಡುಗಳು ಯಾಕೆ ಬೇಕು?. ಯುವಜನತೆ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಇದೆ.

ತುಳುನಾಡಿನ ಮಣ್ಣಿನ ಸೊಗಡನ್ನು ಸಾರುವ, ತುಳುವ ಸಾಂಸ್ಕೃತಿಕ ದರ್ಶನ ನೀಡುವ ಬಹುತೇಕ ಆಚರಣೆಗಳು ಆಧುನಿಕತೆ, ವೈದಿಕತೆಯ ಭರಾಟೆಯಲ್ಲಿ ಜಾನಪದದ ಎಲ್ಲೆ ಮೀರಿ ವಿಜೃಂಭಿಸುತ್ತಿದ್ದು ಮನೆಯಲ್ಲಿ ಗಡಿಹಿಡಿದವರು ಕಟ್ಟುತ್ತಿದ್ದ ಕಲಶ ಗಣಹೋಮವಾಗಿ ಬದಲಾಗಿದೆ. ‘ಕೋಲ’ ಕೋಲೋತ್ಸವ, ‘ನೇಮ’ ನೇಮೋತ್ಸವವಾಗಿದೆ. ‘ಕಲಸ’ ಬ್ರಹ್ಮಕಲಶ, ಬ್ರಹ್ಮಕಲಶೋತ್ಸವ, ಬ್ರಹ್ಮಕಲಶ ಮಹೋತ್ಸವ ಆಗಿದೆ. ‘ಜಾತ್ರೆ’ ಜಾತ್ರೋತ್ಸವ, ಜಾತ್ರಾ ಮಹೋತ್ಸವ ಆಗಿದೆ. ಅನಾದಿಕಾಲದಿಂದ ತುಳುವರು ಆರಾಧಿಸುತ್ತಿದ್ದ ‘ಬೆಮ್ಮೆರ್’ ಬ್ರಹ್ಮರಾಗಿದ್ದಾರೆ, ಬ್ರಹ್ಮಲಿಂಗೇಶ್ವರರಾಗಿದ್ದಾರೆ. ಬೆಮ್ಮೆರೆ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರವಾಗಿದೆ. ಭೂಮಿ ತಾಯಿ ‘ಲೆಕ್ಕೆಸಿರಿ’ ರಕ್ತೇಶ್ವರೀ ಆಗಿದ್ದಾಳೆ, ‘ನಾಗ’ ನಾಗಬ್ರಹ್ಮನಾಗಿದ್ದಾನೆ. ಹೀಗಿರುವಾಗ ತುಳುನಾಡಿನ ಆಚರಣೆಗಳ ಮೂಲ ಸ್ವರೂಪ ಉಳಿಯುವುದೆಲ್ಲಿ? ಮೂಲಸ್ವರೂಪ ಉಳಿಸಲಾಗದೆ ಆಚರಿಸಲ್ಪಡುವ ಯಾವುದೇ ಅಚರಣೆಗಳಿಂದ ಸಾಧಿಸುವುದೇನನ್ನು? ಆಚರಣೆಗಳ ಸ್ವರೂಪ ಬದಲಾದರೂ ಆಚರಣೆಗಳ ಹಿಂದಿರುವ ಕೆಟ್ಟ ಕಟ್ಟುಪಾಡುಗಳು ಬದಲಾಗಿಲ್ಲ ಯಾಕೆ?...ಇತ್ಯಾದಿ ಪ್ರಶ್ನೆಗಳೆಲ್ಲ ಉದ್ಭವಿಸುವ ಈ ಸಂದರ್ಭದಲ್ಲಿ ಯುವಜನರ ವೈಚಾರಿಕ ನಿಲುವು ಅತೀ ಮುನ್ನೆಲೆಗೆ ಬರಬೇಕಾಗಿದೆ.

ನಮ್ಮ ಮನೆಯ ಕಾಯುವ ಕಲ್ಲುರ್ಟಿ ಕಲ್ಲುರ್ಟೇಶ್ವರಿ ಆಗುವ ಮುನ್ನ, ಮನೆಯಲ್ಲಿ ನಡೆಯುವ ‘ಅಗೇಲು’ ಅಗೇಲೋತ್ಸವ ಆಗುವ ಮುನ್ನ ನಮ್ಮ ಯುವಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ವೈಚಾರಿಕ ಚಿಂತನೆಯೊಂದಿಗೆ ತುಳುನಾಡಿನ ಮೂಲಸಂಸ್ಕೃತಿ, ಆಚರಣೆಗಳನ್ನು ಉಳಿಸಿ ಬೆಳೆಸಲು ಸಂಕಲ್ಪತೊಡಬೇಕಾಗಿದೆ. ಅಂದಿನ ಆಚರಣೆಗಳ ಇಂದಿನ ಪ್ರಸ್ತುತತೆ, ಅದರ ಹಿಂದಿರುವ ವೈಚಾರಿಕತೆಗೆ ಹೆಚ್ಚು ಒತ್ತು ನೀಡಬೇಕಾಗಿರುವುದು ಇಂದಿನ ತುರ್ತು.

Writer - ಗೋಪಾಲ ಅಂಚನ್

contributor

Editor - ಗೋಪಾಲ ಅಂಚನ್

contributor

Similar News