ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಿದ ಶಾಲೆ: ಹಿಂದೂ, ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ತರಗತಿ!

Update: 2018-10-10 09:13 GMT

ಹೊಸದಿಲ್ಲಿ, ಅ.10: ದಿಲ್ಲಿಯ ವಾಝಿರಾಬಾದ್ ಎಂಬಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಹಿಂದು ಮತ್ತು ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ತರಗತಿಗಳಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ ಎಂದು ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಮುಖಾಂತರ ನೇಮಕಗೊಂಡ ಕೆಲ ಶಿಕ್ಷಕರು ಆರೋಪಿಸಿದ್ದಾರೆ.

ಮಾಧ್ಯಮ ಸಂಸ್ಥೆಯೊಂದಕ್ಕೆ ದೊರೆತ ಶಾಲೆಯ ವಿವಿಧ ತರಗತಿಗಳ ವಿದ್ಯಾರ್ಥಿಗಳ ವಿವರಗಳಲ್ಲಿ ಕೆಲ ತರಗತಿಗಳ ಒಂದು ಸೆಕ್ಷನ್ ನಲ್ಲಿ ಕೇವಲ ಹಿಂದು ವಿದ್ಯಾರ್ಥಿಗಳಿದ್ದರೆ ಇನ್ನೊಂದು ಸೆಕ್ಷನ್ನಿನಲ್ಲಿ ಕೇವಲ ಮುಸ್ಲಿಂ ವಿದ್ಯಾರ್ಥಿಗಳಿರುವುದು ಪತ್ತೆಯಾಗಿದೆ.

ಆದರೆ ವಿದ್ಯಾರ್ಥಿಗಳನ್ನು ಧರ್ಮದ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಬೇರೆ ಬೇರೆ ಸೆಕ್ಷನ್ ಗಳಲ್ಲಿ ಕೂರಿಸಲಾಗಿದೆ ಎಂಬುದನ್ನು ಶಾಲೆಯ ಉಸ್ತುವಾರಿ ಮುಖ್ಯೋಪಾಧ್ಯಾಯ ಸಿ.ಬಿ.ಸಿಂಗ್ ಸೆಹ್ರಾವತ್ ನಿರಾಕರಿಸುತ್ತಾರೆ. ವಿವಿಧ ಸೆಕ್ಷನ್ ಗಳ ವಿದ್ಯಾರ್ಥಿಗಳನ್ನು ಅದಲು ಬದಲು ಮಾಡುವುದು ಸಾಮಾನ್ಯ. ಶಿಸ್ತು, ಶಾಂತಿ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣದ ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರಲ್ಲದೆ ಕೆಲವೊಮ್ಮೆ ವಿದ್ಯಾರ್ಥಿಗಳು ಜಗಳ ಮಾಡುತ್ತಿರುವುದರಿಂದಲೂ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

‘‘ಕೆಲ ಮಕ್ಕಳು ಸಸ್ಯಾಹಾರಿಗಳಾಗಿದ್ದಾರೆ. ಆದುದರಿಂದ ಭಿನ್ನಾಭಿಪ್ರಾಯಗಳು ಮೂಡಿ ಬರುವುದು ಸಹಜ’’ ಎಂದೂ ಅವರು ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದು ಹೊಸ ಉಸ್ತುವಾರಿ ಮುಖ್ಯೋಪಾಧ್ಯಾಯರು ಜುಲೈಯಲ್ಲಿ ಅಧಿಕಾರ ವಹಿಸಿದಂದಿನಿಂದ ನಡೆದುಕೊಂಡು ಬಂದಿದೆ ಎಂಬ ಆರೋಪವಿದೆ.

ಕೆಲ ಶಿಕ್ಷಕರು ಮುನಿಸಿಪಲ್ ಕಾರ್ಪೊರೇಶನ್‌ಗೆ ದೂರು ನೀಡಿದ್ದರೂ ಕ್ರಮದ ಭಯದಿಂದ ಲಿಖಿತ ದೂರು ದಾಖಲಿಸಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಮುನಿಸಿಪಲ್ ಕಾರ್ಪೊರೇಶನ್‌ನ ಶಿಕ್ಷಣ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News