ನಕಲಿ ಆರ್ಥಿಕ ದತ್ತಾಂಶಗಳ ಮೂಲಕ ದೇಶವನ್ನು ತಪ್ಪು ದಾರಿಗೆಳೆಯಲಾಗುತ್ತಿದೆ

Update: 2018-10-10 11:01 GMT

ಅಹ್ಮದಾಬಾದ್, ಅ.10: ನಕಲಿ ಮತ್ತು ಬೋಗಸ್ ಆರ್ಥಿಕ ದತ್ತಾಂಶಗಳ ಮೂಲಕ ದೇಶವನ್ನು ತಪ್ಪು ದಾರಿಗೆಳೆಯಲಾಗುತ್ತಿದೆ, ಎಂದು ಮಾಜಿ ಕೇಂದ್ರ ವಿತ್ತ ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯದ ವಿಚಾರದಲ್ಲಿಯೂ ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಆಡಳಿತದಲ್ಲಿ ದೇಶದ ಆರ್ಥಿಕತೆಯ ಪ್ರಗತಿ ಬಗ್ಗೆ ಕೇಂದ್ರ ಸರಕಾರ ನೀಡುತ್ತಿರುವ ಮಾಹಿತಿಯನ್ನು ಅವರು ಪ್ರಶ್ನಿಸಿದ್ದಾರೆ. ಹೂಡಿಕೆದಾರರು ಹಲವಾರು ಲಕ್ಷ ಕೋಟಿ ರೂಪಾಯಿಗಳನ್ನು ವಾಪಸ್ ಪಡೆದಿರುವುದು ಆತಂಕಕಾರಿ ಬೆಳವಣಿಗೆ ಎಂದೂ ಅವರು ಹೇಳಿದ್ದಾರೆ. “ಅವರು ನಕಲಿ ದತ್ತಾಂಶಗಳನ್ನು ನೀಡುತ್ತಿದ್ದಾರೆ. ದೇಶವು ಶೇ.8ರಷ್ಟು ಪ್ರಮಾಣದಲ್ಲಿ ಪ್ರಗತಿ ದಾಖಲಿಸುತ್ತಿದ್ದರೆ ರೂಪಾಯಿಯೇಕೆ ಇಷ್ಟು ದುರ್ಬಲವಾಗಿದೆ” ಎಂದು ಅವರು ಪ್ರಶ್ನಿಸಿದರು.

“2013ರಲ್ಲಿ ರೂಪಾಯಿ ಮೌಲ್ಯ ಕುಸಿದಾಗ ಈಗಿನ ಪ್ರಧಾನಿ ಆಗ ದೊಡ್ಡದಾಗಿ, ರೂಪಾಯಿ ಐಸಿಯುಗೆ ಸೇರಿದೆ ಎಂದಿದ್ದರು. ಈಗ ರೂಪಾಯಿ ಡಾಲರ್ ಎದುರು 75 ತಲುಪುವಷ್ಟಾದರೂ ಅವರು ಸೊಲ್ಲೆತ್ತುತ್ತಿಲ್ಲ,''ಎಂದು ಸಿನ್ಹಾ  ಹೇಳಿದರು. ರಾಷ್ಟ್ರ ಮಂಚ್ ಇದರ ಗುಜರಾತ್ ಘಟಕದ ಸಬೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದ ಕಾರ್ಮಿಕ ಬ್ಯುರೋ  ನಡೆಸುವ ಸಮೀಕ್ಷೆಯೊಂದು ಉದ್ಯೋಗ್ ಸೃಷ್ಟಿ ಬಗ್ಗೆ ನೀಡಿದ ಮಾಹಿತಿ ಕೇಂದ್ರ ಸರಕಾರಕ್ಕೆ ಅನುಕೂಲಕರವಲ್ಲವೆಂದು ಆ ಕಾರ್ಯವನ್ನು ಕಾರ್ಮಿಕರ ಭವಿಷ್ಯನಿಧಿ ಸಂಘಟನೆಗೆ ವರ್ಗಾಯಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ``ಈ ಮಾಹಿತಿಯು ಉದ್ಯೋಗದ ಬಗೆಗಿನ ದತ್ತಾಂಶವಾಗಲು ಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದರೆ ಮೋದೀಜಿ ತಮಗೆಲ್ಲಾ ಗೊತ್ತು ಎಂದು ಹೇಳುತ್ತಿದ್ದಾರೆ,''ಎಂದರು ಸಿನ್ಹಾ.

ದೇಶದ ಆರ್ಥಿಕತೆಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಸಮರ್ಪಕವಾಗಿ ನಿರ್ವಹಿಸಿದ್ದಷ್ಟು ಕೆಟ್ಟದ್ದಾಗಿ ಹಿಂದೆಂದೂ ನಿರ್ವಹಿಸಲಾಗಿರಲಿಲ್ಲ, ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News