ಜನಸಾಮಾನ್ಯರ ಬವಣೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ: ಶೋಭಾ ಕರಂದ್ಲಾಜೆ ಆರೋಪ

Update: 2018-10-11 11:37 GMT

ಚಿಕ್ಕಮಗಳೂರು, ಅ.11: ರಾಜ್ಯದಲ್ಲಿ ಸರಕಾರವೇ ಇಲ್ಲ, ಜನಸಾಮಾನ್ಯರ ಬವಣೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಜನಪರ ಯೋಜನೆಗಳ ಜಾರಿಯಾಗಿಲ್ಲ, ಮುಖ್ಯಮಂತ್ರಿ ಸೇರಿದಂತೆ ಸರಕಾರದ ಸಚಿವರು ಅಧಿಕಾರಿಗಳ ವರ್ಗಾವಣೆಯಲ್ಲಿ ಮತ್ತು ದೇವಸ್ಥಾನ ಸುತ್ತುವುದನ್ನೇ ಅಭಿವೃದ್ಧಿ ಎಂದು ಭಾವಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾದ ಮೊದಲ ದಿನದಿಂದಲೇ ಗೊಂದಲ ಮುಂದುವರಿದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಒಳಗಿನ ಗುದ್ದಾಟ, ಬಂಡಾಯ, ಮಂತ್ರಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದ ಸರಕಾರದಲ್ಲಿ ಒಮ್ಮತವಿಲ್ಲದಂತಾಗಿದೆ. ಅಭಿವೃದ್ಧಿ ಕೆಲಸ ನಾಲ್ಕು ತಿಂಗಳಿಂದ ಆಗಿಲ್ಲ, ಎಲ್ಲ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ದೇವಸ್ಥಾನ ಸುತ್ತುವುದು ಬಿಟ್ಟರೇ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಎಷ್ಟು ಜನಕ್ಕೆ ಸಾಲಮನ್ನಾ ಆಯ್ತು, ಯಾರಿಗೆ ಸಾಲಮನ್ನಾ ಆಗುತ್ತದೆ? ಎಷ್ಟು ಆಗುತ್ತದೆ? ಯಾವಾಗ ಆಗುತ್ತದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಶಾಸಕರಿಗೆ ಹಣ ನೀಡಿಲ್ಲ. ಶಾಸಕರಿಗೆ ನೀಡುವಂತಹ ಹಣವನ್ನು ಸಾಲಮನ್ನಾಕ್ಕೆ ನೀಡುತ್ತೇನೆಂದು ಮುಖ್ಯಮಂತ್ರಿ ಹೇಳುತ್ತಾರೆ. ಸಾಲ ಮನ್ನಾದಿಂದ ಯಾರಿಗೆ ಉಪಯೋಗವಾಗಿದೆ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲವಿದೆ. ಮಲೆನಾಡು ಭಾಗದಲ್ಲಿ ನೆರೆಹಾವಳಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಕಾಫಿ, ಅಡಿಕೆ, ಕಾಳುಮೆಣಸು ಬೆಳೆ ನಷ್ಟವಾಗಿದೆ. ರಾಜ್ಯ ಸರಕಾರದ ಬೊಕ್ಕಸದಿಂದ ಪರಿಹಾರ ನೀಡಬೇಕು. ಅಥವಾ ಕೇಂದ್ರಕ್ಕೆ ವರದಿ ನೀಡಬೇಕು. ಇದ್ಯಾವುದೂ ಸರಕಾರದಿಂದ ನಡೆಯುತ್ತಿಲ್ಲ ಎಂದು ದೂರಿದ ಅವರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಅಭ್ಯರ್ಥಿಯ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ಅಭ್ಯರ್ಥಿ ಆಯ್ಕೆಯನ್ನು ಪಕ್ಷ ನಿರ್ಧರಿಸಲಿದ್ದು, ಜಿಲ್ಲೆಯ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಾರರ ಸಮಸ್ಯೆ ಮತ್ತು ಜಿಲ್ಲೆಯ ಸಮಸ್ಯೆಗಳ ಕುರಿತು ಕೇಂದ್ರ ಸರಕಾರಕ್ಕೆ ನಿಯೋಗ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News