ಕೊಪ್ಪ: ಒಳಾಂಗಣ ಕ್ರೀಡಾಂಗಣದ ಕಾಮಗಾರಿಗೆ ಶಾಸಕ ರಾಜೇಗೌಡ ಚಾಲನೆ

Update: 2018-10-11 11:41 GMT

ಕೊಪ್ಪ, ಅ.11: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಳಾಂಗಣ ಕ್ರೀಡಾಂಗಣಕ್ಕೆ ಬುಧವಾರ ಶಾಸಕ ಟಿ.ಡಿ. ರಾಜೇಗೌಡ ಶಿಲಾನ್ಯಾಸ ನೆರವೇರಿಸಿದರು.

ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಲೇಜಿನ ಪ್ರಾಂಶುಪಾಲರ ಶ್ರಮ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮತ್ತು ಮೂಲಭೂತ ಸೌಲಭ್ಯಗಳನ್ನು ಪರಿಗಣಿಸಿ ನ್ಯಾಷನಲ್ ಅಕ್ರೆಡಿಟೇಷನ್ ಆಂಡ್ ಅಸೆಸ್‍ಮೆಂಟ್ ಕೌನ್ಸಿಲ್(ನ್ಯಾಕ್) ಕಾಲೇಜಿಗೆ ಬಿ+ ಗ್ರೇಡ್ ನೀಡಿತ್ತು. ಇದರ ಆಧಾರದಲ್ಲಿ ಕಾಲೇಜಿನ ಅಭಿವೃದ್ಧಿಗೆ ಯುಜಿಸಿ  70 ಲಕ್ಷ ರೂ. ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಹೊಂದಾಣಿಕೆ ಅನುದಾನ(ಮ್ಯಾಚಿಂಗ್ ಗ್ರಾಂಟ್)ವನ್ನು ರಾಜ್ಯ ಸರಕಾರದಿಂದ ಬಿಡುಗಡೆ ಮಾಡಿಸದೇ ವಿಳಂಬವಾದ ಕಾರಣ ಈಗ 35 ಲಕ್ಷ ರೂ. ಬಿಡುಗಡೆಯಾಗಿದೆ. ಈ ಅನುದಾನದ ಜೊತೆಗೆ ಕಾಲೇಜು ನಿಧಿಯಿಂದ 5ಲಕ್ಷ ರೂ. ಹಾಗೂ ಕಾಲೇಜು ಆವರಣದಲ್ಲಿರುವ ಮರ ಮಾರಾಟದಿಂದ 15 ಲಕ್ಷ ರೂ. ಸೇರಿ ಒಟ್ಟು 65 ಲಕ್ಷ ರೂ. ಕ್ರೋಡೀಕರಿಸಲಾಗಿದೆ. ಹೊಂದಾಣಿಕೆ ಅನುದಾನವನ್ನು ಸರಕಾರದಿಂದ ಕೊಡಿಸುವುದರ ಜೊತೆಗೆ ಮಿಕ್ಕ ಅನುದಾನನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಇತರ ಮೂಲಗಳಿಂದ ಒದಗಿಸಲಾಗುವುದು. ಈ ಶೈಕ್ಷಣಿಕ ಅವಧಿಯೊಳಗೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಕಾಲೇಜಿಗೆ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಾಚನಾಲಯ, ಸ್ನಾತಕೋತ್ತರ ಕಾಲೇಜು ಮತ್ತು ಮಹಿಳಾ ವಸತಿ ನಿಲಯ ನಿರ್ಮಾಣದ ಬಗ್ಗೆ ಗಮನ ಹರಿಸಲಾಗುವುದು. ಚಿಕ್ಕಮಗಳೂರು ತಾಲೂಕಿನ ವಸ್ತಾರೆಯಿಂದ ಕೊಪ್ಪ ಮೂಲಕ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಗಲೀಕರಣಕ್ಕೆ 50ರೂ. ಕೋಟಿ ಹಾಗೂ ರಸ್ತೆಯುದ್ಕಕ್ಕೂ ಬರುವ ಸೇತುವೆಗಳ ನಿರ್ಮಾಣಕ್ಕೆ 30 ಕೋ. ರೂ. ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಶೃಂಗೇರಿ ಶಾರದಾಪೀಠ, ರಂಭಾಪುರಿ ಪೀಠ, ಸಿಂಹನಗದ್ದೆ ಜೈನ ಮಠ ಇನ್ನಿತರ ಧಾರ್ಮಿಕ ಕ್ಷೇತ್ರಗಳಿದ್ದು ಪ್ರವಾಸೋಧ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಪ್ರವಾಸಿಗರನ್ನು ಸೆಳೆಯಲು ಜಂಗಲ್ ರೆಸಾರ್ಟ್‍ಗಳನ್ನು ಪ್ರಾರಂಭಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಾ ದಿನೇಶ್, ತಾಪಂ ಸದಸ್ಯೆ ಮಧುರಾ ಶಾಂತಪ್ಪ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಅನುಸೂಯಾ ಕೆ.ಮೂರ್ತಿ, ಸದಸ್ಯರಾದ ಕೆ.ಎಸ್.ಹರೀಶ್ ಭಂಡಾರಿ, ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ, ಸಿ.ಕೆ. ಮಾಲತಿ, ವಿಜಯಕುಮಾರ್, ಪ್ರಾಂಶುಪಾಲ ಎಸ್.ಅನಂತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News