ಕೊರಳು ಕತ್ತರಿಸಿ ವ್ಯಕ್ತಿಯ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ, 1 ಲಕ್ಷ ರೂ. ದಂಡ

Update: 2018-10-11 11:46 GMT

ತುಮಕೂರು,ಅ.11: ಮದ್ಯಪಾನ ಮಾಡಲು ಜಾಗ ಬಿಟ್ಟುಕೊಡಲಿಲ್ಲವೆಂಬ ಕಾರಣಕ್ಕೆ ಚಾಕುವಿನಿಂದ ವ್ಯಕ್ತಿಯೊಬ್ಬನ ಕೊರಳು ಕತ್ತರಿಸಿ, ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಆರೋಪಿ ಸದ್ದಾಂ ಹುಸೇನ್ ರೌಡಿಶೀಟರ್ ಆಗಿದ್ದು, 2017ರ ಆಗಸ್ಟ್ 26 ರಂದು ಶಿರಾ ಬಸ್ ನಿಲ್ದಾಣದ ಬಳಿ ಗಲ್ಲಿಯಲ್ಲಿ ಕುಳಿತಿದ್ದ ಮೃತ ಜಬಿವುಲ್ಲಾ ಅವರ ಬಳಿ ಬಂದು, ನೀನು ಇಲ್ಲಿಂದ ಎದ್ದು ಹೋಗು, ನಾನು ಇಲ್ಲಿ ಮದ್ಯಪಾನ ಮಾಡಬೇಕು ಎಂದು ಜೋರು ಮಾಡಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ನಾನು ರೌಡಿಯಾಗಿದ್ದು, ನನಗೆ ಜಾಗ ಬಿಡುವುದಿಲ್ಲ ಎನ್ನುತ್ತೀಯಾ ಎಂದು ಹತ್ತಿರದಲ್ಲಿಯೇ ಇದ್ದ ಜಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ ಎನ್ನಲಾಗಿದ್ದು, ಈ ಸಂಬಂಧ ಶಿರಾ ಸಿಪಿಐ ಲಕ್ಷ್ಮಯ್ಯ ತನಿಖೆ ನಡೆಸಿ, ಆರೋಪಿ ಸದ್ದಾಂ ಹುಸೇನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸದರಿ ಕೇಸಿನ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ ಅವರು ಆರೋಪಿಗೆ ಐಪಿಸಿ ಕಲಂ 307ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 85 ಸಾವಿರ ರೂ. ಗಳನ್ನು ಮೃತ ಜಬಿವುಲ್ಲಾನ ಪತ್ನಿ, ಜುಬಿನಾ ಭಾನು ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News