ಭಡ್ತಿ ಮೀಸಲಾತಿ ಕಾಯ್ದೆ ಜಾರಿಯಾದರೆ ಸರಕಾರದ ವಿರುದ್ಧ ಅಸಹಕಾರ ಚಳುವಳಿ: ಅಹಿಂದ ನೌಕರರ ಒಕ್ಕೂಟ

Update: 2018-10-11 11:54 GMT

ತುಮಕೂರು,ಅ.11: ರಾಜ್ಯ ಸರಕಾರ ಶೇ.18ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತ ಕಾಯುವ ಉದ್ದೇಶದಿಂದ, ಭಡ್ತಿ ಮೀಸಲಾತಿ ಕುರಿತ 2017 ಫೆ.09 ರಂದು ಸುಪ್ರಿಂಕೋರ್ಟಿನ ಆದೇಶ ಅಸಿಂಧುಗೊಳಿಸಲು ಜಾರಿಗೆ ತಂದ 2018ರಲ್ಲಿ ರಾಜ್ಯ ಸರಕಾರ ಭಡ್ತಿ ಮೀಸಲಾತಿ ಕುರಿತ ಕಾಯ್ದೆಯನ್ನು ಜಾರಿಗೊಳಿಸದಂತೆ ಅಹಿಂದ ನೌಕರರ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಅಹಿಂದ ನೌಕರರ ಒಕ್ಕೂಟದ ಪದಾಧಿಕಾರಿಗಳಾದ ಎನ್.ನರಸಿಂಹರಾಜು, ಕೆ.ಪಿ.ಕೃಷ್ಣಮೂರ್ತಿ, ಮಹಾಲಿಂಗಪ್ಪ.ಪಿ, ರಂಗನಾಥ್ ಹಾಗೂ ಇತರೆ ಅಹಿಂದ ನೌಕರರು, ಇಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರಿಗೆ ಸಲ್ಲಿಸಿದರು.

1978ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತ ಕಾಯಲು ಅಂದಿನ ದೇವರಾಜ ಅರಸು ಸರಕಾರ ಜಾರಿಗೆ ತಂದಿದ್ದ ಭಡ್ತಿ ಮೀಸಲಾತಿಯಿಂದ ಸರಕಾರದ ಪ್ರಮುಖ ಹುದ್ದೆಗಳು ಶೇ.18ರಷ್ಟು ಜನಸಂಖ್ಯೆ ಇರುವ ಎರಡು ಸಮುದಾಯಗಳಿಗೆ ದೊರೆಯುತ್ತಿದ್ದು, ಶೇ.82ರಷ್ಟು ಜನಸಂಖ್ಯೆ ಇರುವ ಇತರೆ ನೌಕರರ ವರ್ಗದವರಿಗೆ ಇದರಿಂದ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಸುಮಾರು 35 ವರ್ಷಗಳ ನಿರಂತರ ಹೋರಾಟದ ಫಲವಾಗಿ 2017ರ ಫೆಬ್ರವರಿ 09 ರಂದು ಸುಪ್ರಿಂಕೋರ್ಟ್, ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಮುಂದುವರೆಸಿ, ಭಡ್ತಿಯಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿ, ಮುಂದಿನ ಆರು ತಿಂಗಳ ಒಳಗೆ ಜಾರಿಗೆ ತರುವಂತೆ ಆದೇಶ ನೀಡಿತ್ತು. ಆದರೆ ರಾಜ್ಯ ಸರಕಾರ ಇದುವರೆಗೂ ಸುಪ್ರಿಂಕೋರ್ಟಿನ ಆದೇಶವನ್ನು ಜಾರಿಗೆ ತಂದಿಲ್ಲ. ಅಲ್ಲದೆ ಮರು ಪರಿಶೀಲನಾ ಅರ್ಜಿ ವಿಚಾರಣೆ ಹಂತದಲ್ಲಿ ಇರುವಾಗಲೇ ಭಡ್ತಿ ಮೀಸಲಾತಿ ಸಿಂಧುತ್ವ ಕುರಿತ ಕಾಯ್ದೆ-2018ನ್ನು ಕೆಲ ವರ್ಗದ ಶಾಸಕರು ಮತ್ತು ಮಂತ್ರಿಗಳ ಒತ್ತಾಯಕ್ಕೆ ಮಣಿದು ಜಾರಿಗೆ ತರಲು ಹೊರಟಿದೆ. ಇದು ಸರಿಯಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಯುತ್ತಿರುವ ವೇಳೆಯಲ್ಲಿ ಅದೇಶವನ್ನು ಆಸಿಂಧುಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ ಉಳಿದ ಶೇ.82ರಷ್ಟು ಇತರೆ ಹಿಂದುಳಿದ ಮತ್ತು ಸಾಮಾನ್ಯ ವರ್ಗದ ನೌಕರರು ಸರಕಾರದ ವಿರುದ್ಧ ಅಸಹಕಾರ ಚಳುವಳಿ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News