ದಸರಾ ಬಹುಭಾಷಾ ಕವಿಗೋಷ್ಠಿ ರದ್ದು: ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಕವಿಗೋಷ್ಠಿ ಸಮಿತಿ

Update: 2018-10-11 12:34 GMT

ಮಡಿಕೇರಿ, ಅ.11: ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದು ಪಡಿಸಿರುವ ಮಡಿಕೇರಿ ದಸರಾ ಸಮಿತಿಯ ಕ್ರಮವನ್ನು ಖಂಡಿಸಿ, ಅನುದಾನ ರಹಿತವಾಗಿ ‘ಸಂತ್ರಸ್ತರಿಗೆ ಸಾಂತ್ವನ’ ವಿಷಯದಡಿ ಕವಿಗೋಷ್ಠಿಯನ್ನು ನಡೆಸುವ ಮೂಲಕ ಸಾಂಕೇತಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗುವುದು ಎಂದು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಯ ಧೋರಣೆಯ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ ಅವರು, ಯುವ ಸಮೂಹಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಕವಿಗೋಷ್ಠಿ ಮತ್ತು ಕ್ರೀಡಾಕೂಟ ರದ್ದು ಪಡಿಸಿರುವುದು ಯೋಗ್ಯ ಕ್ರಮವಲ್ಲ. ಇಂತಹ ನಿರ್ಧಾರ ತಳೆಯುವ ಸಂದರ್ಭ ದಸರಾ ಸಮಿತಿ ತಮ್ಮೊಂದಿಗೆ ಚರ್ಚಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ದಸರಾ ಸಮಿತಿಯ ಧೋರಣೆಯನ್ನು ಖಂಡಿಸಿ ಅ.16 ರಂದು ನಗರದ ಬಾಲಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ‘ದಸರಾ ಸಮಿತಿ ಅನುದಾನ ರಹಿತ’ ಘೋಷಣೆಯೊಂದಿಗೆ, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಕವಿಗಳ ಉಪಸ್ಥಿತಿಯಲ್ಲಿ ಕವಿ ಗೋಷ್ಠಿಯನ್ನು ಆಯೋಜಿಸಲಾಗಿದೆ. ಇದರಲ್ಲಿ ಆಹ್ವಾನಿತ 25 ಕವಿಗಳು ‘ಸಂತ್ರಸ್ತರಿಗೆ ಸಾಂತ್ವನ’ ವಿಷಯದಡಿ ಕವನಗಳನ್ನು ವಾಚಿಸಲಿದ್ದಾರೆ. ಜಿಲ್ಲೆಯ ಎಲ್ಲ ಕವಿ ಮನಸುಗಳು ಈ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡು ಬೆಂಬಲವನ್ನು ಸೂಚಿಸುವಂತೆ ಮನವಿ ಮಾಡಿ, ತಮ್ಮ ಈ ನಿರ್ಧಾರಗಳನ್ನು ಕವಿಗೋಷ್ಠಿ ಸಮಿತಿ ಬಯಲಿನಲ್ಲಿ ನಡೆಸಿದ ಸಭೆಯಲ್ಲಿ ಕೈಗೊಂಡಿರುವುದಾಗಿ ಹೇಳಿದರು.

ಕವಿ ಗೋಷ್ಠಿಯಲ್ಲಿ ಕೊಡವ ಭಾಷೆಯ ಹಿರಿಯ ಸಾಹಿತಿಗಳು, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರೂ ಆಗಿರುವ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತರು ಹಾಗೂ ಸಂತ್ರಸ್ತರಾದ ಕುಡೆಕಲ್ ಸಂತೋಷ್ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ ಪಾಲ್ಗೊಳ್ಳಲಿದ್ದು, ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಲಾಗುತ್ತದೆಂದು ತಿಳಿಸಿದರು.

ತಣ್ಣೀರಿನ ಸ್ವಾಗತ: ಕವಿಗೋಷ್ಠಿಯನ್ನು ಯಾವುದೇ ಅನುದಾನವಿಲ್ಲದೆ, ಯಾರಿಂದಲೂ ಚಿಕ್ಕಾಸು ಹಣವನ್ನು ಸಂಗ್ರಹಿಸದೆ ನಡೆಸುವ ಮೂಲಕ ಪ್ರಾಕೃತಿಕ ವಿಕೋಪದಿಂದ ನೊಂದವರಿಗೆ ಸಾಹಿತ್ಯಿಕ ವಲಯದಿಂದ ಸಾಂತ್ವನವನ್ನು ಹೇಳುವುದು ತಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಕವಿ ಗೋಷ್ಠಿಯಲ್ಲಿ ಕಾಫಿ, ತಿಂಡಿ, ಸ್ಮರಣಿಕೆ, ಪ್ರಶಂಸನಾ ಪತ್ರಗಳಾವುದೂ ಇರುವುದಿಲ್ಲ. ಬದಲಾಗಿ, ಬಂದವರಿಗೆ ‘ತಣ್ಣೀರ’ನ್ನು ನೀಡುವ ಮೂಲಕ ದಸರಾ ಸಮಿತಿ ಸಾಹಿತ್ಯಿಕ ವಲಯವನ್ನು ಕಡೆಗಣಿಸಿರುವುದನ್ನು ಖಂಡಿಸಲಾಗುತ್ತದೆಂದು ಸ್ಪಷ್ಟಪಡಿಸಿದರು.

ಮುಂಗಾರಿನ ಮಹಾಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದಸರಾವನ್ನು ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಸರಳವಾಗಿ ಆಚರಿಸಲು ನಿರ್ಧಾರ ತಳೆಯಲಾಗಿತ್ತು. ಬಳಿಕ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಪೂರ್ವಭಾವಿ ಸಭೆ ನಡೆಸಿ ಮಡಿಕೇರಿ ದಸರಾ ಉತ್ಸವಕ್ಕೆ 50 ಲಕ್ಷ ರೂ. ಅನುದಾನ ಘೋಷಿಸಿರುವುದ ಶ್ಲಾಘನೀಯ ಮತ್ತು ಇದರಲ್ಲಿ ದಶ ಮಂಟಪಗಳಿಗೆ ತಲಾ 2 ಲಕ್ಷ ಮತ್ತು ನಾಲ್ಕು ಶಕ್ತಿ ದೇವತೆಗಳಿಗೆ 1.50 ಲಕ್ಷ ನೀಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಉಳಿದ 24 ಲಕ್ಷ ಅನುದಾನದಲ್ಲಿ ವರ್ಷಂಪ್ರತಿ ಸರಳವಾಗಿಯೇ ಆಚರಿಸಿಕೊಂಡು ಬರುತ್ತಿರುವ ಕವಿ ಗೋಷ್ಠಿಗೆ 60 ಸಾವಿರ ರೂ. ಅನುದಾನ ನಿಡಲು ಸಾಧ್ಯವಿರಲಿಲ್ಲವೆ ಎಂದು ರಮೇಶ್ ಉತ್ತಪ್ಪ ಪ್ರಶ್ನಿಸಿ, ಕವಿ ಗೋಷ್ಠಿ ಎನ್ನುವುದು ಯಾವತ್ತೂ ಅದ್ಧೂರಿಯ ಆಚರಣೆಯಲ್ಲವೆಂದು ತಿಳಿಸಿದರು.

ನವರಾತ್ರಿಯ ಕೊನೆಯ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ದಸರಾ ಸಮಿತಿ ನಿರ್ಧರಿಸಿರುವುದಲ್ಲದೆ, ಇದಕ್ಕಾಗಿ ವೇದಿಕೆ ನಿರ್ಮಾಣಕ್ಕೆ 8 ರಿಂದ 10 ಲಕ್ಷ ರೂ.ಗಳನ್ನು ವ್ಯಯಿಸಲು ಮುಂದಾಗಿದೆ. ಇವುಗಳ ನಡುವೆ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವ ಕವಿಗೋಷ್ಠಿ ಮತ್ತು ಕ್ರೀಡಾಕೂಟಕ್ಕೆ ಅನುದಾನ ಒದಗಿಸಲು ಸಾಧ್ಯವಾಗುತ್ತಿರಲಿಲ್ಲವೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಪ್ರತಿ ವರ್ಷ ಕವಿಗೋಷ್ಠಿಯನ್ನು ದಸರಾ ಸಮಿತಿ ನೀಡುವ 60 ಸಾವಿರದ ಸಣ್ಣ ನೆರವಿನೊಂದಿಗೆ ನಡೆಸಲಾಗುತ್ತಿದೆ. ಆಹ್ವಾನ ಪತ್ರಿಕೆ ಮುದ್ರಣ, ಕವನ ಸಂಗ್ರಹ ಮುದ್ರಣ, ಕವಿಗಳಿಗೆ ಪ್ರಮಾಣ ಪತ್ರ, ಕವಿಗಳಿಗೆ ಸಣ್ಣ ಪ್ರಮಾಣದ ಪ್ರಯಾಣ ಭತ್ಯೆ ನೀಡುವ ಎಲ್ಲಾ ಕಾರ್ಯಗಳು ಈ ಸಣ್ಣ ಅನುದಾನದಲ್ಲಿ ಸರಿದೂಗಿಸಿಕೊಂಡು ಹೋಗಬೇಕಾಗಿದೆಯೆಂದು ತಿಳಿಸಿದ ರಮೇಶ್, ಇಷ್ಟು ಸಣ್ಣ ಮೊತ್ತದ ಅನುದಾನವನ್ನು ಕವಿಗೋಷ್ಠಿಗೆ ನೀಡುವುದೆ ಸಾಹಿತ್ಯ ವಲಯಕ್ಕೆ ಮಾಡುವ ಅವಮಾನವೆಂದು ಕಟುವಾಗಿ ನುಡಿದರು. 

ಆಕ್ಷೇಪ: ದಸರಾ ಬಹುಭಾಷಾ ಕವಿಗೋಷ್ಠಿಗೆ ಸಂಬಂಧಿಸಿದಂತೆ ದಸರಾ ಸಮಿತಿಯ ಕೆಲವರು, ಕವಿಗೋಷ್ಠಿ ನಡೆಸುವುದು ಕಪ್ಪು ಚುಕ್ಕೆಯಾಗುತ್ತದೆಂದು ಅಭಿಪ್ರಾಯಿಸಿದ್ದಾರೆಂದು ತಿಳಿಸಿದ ರಮೇಶ್ ಉತ್ತಪ್ಪ, ದಸರಾ ಸಮಿತಿಗೆ ಕವಿಗೋಷ್ಠಿಯ ಕಲ್ಪನೆಗಳೆ ಇಲ್ಲವೆಂದು ಬೇಸರ ವ್ಯಕ್ತಪಡಿಸಿ, ಯುವ ಸಮೂಹವನ್ನು ಪ್ರೋತ್ಸಾಹಿಸುವ ಕವಿಗೋಷ್ಠಿ ಎಂದಿಗೂ ಕಪ್ಪು ಚುಕ್ಕೆಯಲ್ಲವೆಂದು ದೃಢವಾಗಿ ನುಡಿದರು.

ಕವಿಗೋಷ್ಠಿ ಸಮಿತಿಯ ಪದಾಧಿಕಾರಿ ಕುಡೆಕಲ್ ಸಂತೋಷ್ ಮಾತನಾಡಿ, ಸರ್ಕಾರದಿಂದ ದಸರಾ ಉತ್ಸವಕ್ಕೆ ಬಿಡುಗಡೆಯಾಗಿವ ಅನುದಾನದಲ್ಲಿ ಶೇ.60 ರಷ್ಟು ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು, ಉಳಿದ ಮೊತ್ತವನ್ನಷ್ಟೆ ವೇದಿಕೆ ಇನ್ನಿತರ ಚಟುವಟಿಕೆಗಳಿಗೆ ಬಳಸಲು ಅವಕಾಶವಿರುವುದು. ನಾವು ಅಷ್ಟು ದೊಡ್ಡ ಮೊತ್ತವನ್ನು ಕೇಳುತ್ತಿಲ್ಲ. ಕನಿಷ್ಠ ಶೇ.1ರ ಮೊತ್ತವನ್ನು ನೀಡಿದರೂ ಯುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗಲಿದೆಯೆಂದು ಅಭಿಪ್ರಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಸೀರ್, ಸದಸ್ಯರಾದ ಮನು, ಕಿಶೋರ್ ರೈ ಹಾಗೂ ವಿಘ್ನೇಶ್ ಭೂತನಕಾಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News