ಸಚಿವ ಎನ್.ಮಹೇಶ್ ರಾಜೀನಾಮೆಗೆ ನಿಜವಾದ ಕಾರಣವೇನು ?

Update: 2018-10-11 14:32 GMT

ಬೆಂಗಳೂರು, ಅ. 11: ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಪಿ ಮೈತ್ರಿಕೂಟ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ದಿಢೀರ್ ರಾಜೀನಾಮೆ ನೀಡಿರುವುದು ಭಾರೀ ಚರ್ಚೆ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

‘ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ನಾನು ನನ್ನ ಸ್ವ-ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಎನ್.ಮಹೇಶ್ ಅವರೇ ಸುದ್ಧಿಗೋಷ್ಠಿಯಲ್ಲಿ ಸ್ಪಷ್ಟಣೆ ನೀಡಿದ್ದಾರೆ. ಆದರೆ, ಅವರ ಹಠಾತ್ ರಾಜೀನಾಮೆ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿಗೆ ತೀವ್ರ ತಲೆನೋವಾಗಿರುವ ಈ ಸಂದರ್ಭದಲ್ಲಿ ಸಚಿವ ಮಹೇಶ್ ರಾಜೀನಾಮೆ ‘ಮೈತ್ರಿ ಸರಕಾರದ ಭವಿಷ್ಯ’ದ ಬಗ್ಗೆ ಹೊಸಚರ್ಚೆ ಹುಟ್ಟುಹಾಕಿದೆ.

ಸಚಿವ ಎನ್.ಮಹೇಶ್ ಅವರ ದಿಢೀರ್ ರಾಜೀನಾಮೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರೊಂದಿಗಿನ ವೈಮನಸ್ಸು ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ‘ಅವರೊಂದಿಗೆ ನನ್ನ ಸಂಬಂಧ ಬಹಳ ಚೆನ್ನಾಗಿದೆ. ಅವರೊಬ್ಬ ಉತ್ತಮ ವ್ಯಕ್ತಿ’ ಎಂದು ಮಹೇಶ್ ಸ್ಪಷ್ಟಪಡಿಸಿದ್ದಾರೆ.

ಬೆಹನ್ ಜೀ ಸೂಚನೆ: ಬಿಎಸ್ಪಿ ವರಿಷ್ಠೆ ಮಾಯಾವತಿ ಅವರ ಸೂಚನೆ ಹಿನ್ನೆಲೆಯಲ್ಲಿ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಕಳೆದ ತಿಂಗಳ ಮಾಧ್ಯಮ ಸಂದರ್ಶನವೊಂದರಲ್ಲಿ ಸಚಿವ ಮಹೇಶ್ ಅವರು ‘ಕರ್ನಾಟಕದಲ್ಲಿ ಬಿಎಸ್ಪಿ ಅಸ್ತಿತ್ವ ಇರುವುದು ತಮ್ಮಿಂದ’ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಬಿಎಸ್ಪಿಯ ಸ್ಥಳೀಯ ಹಿರಿಯ ಮುಖಂಡರು ಮಾಯಾವತಿ ಅವರ ಗಮನಕ್ಕೆ ತಂದಿದ್ದು, ಇದರಿಂದ ಕೆಂಡಮಂಡಲರಾದ ಮಾಯಾವತಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಹೇಶ್‌ರಿಗೆ ಸೂಚಿಸಿದ್ದಲ್ಲದೆ, ಅವರ ರಾಜೀನಾಮೆ ಅಂಗೀಕರಿಸುವಂತೆಯೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆಂದು ಹೇಳಲಾಗುತ್ತಿದೆ.

ಈ ಮಧ್ಯೆ ಎನ್.ಮಹೇಶ್ ಸಚಿವರಾದ ಬಳಿಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸಂಘಟನೆಗೆ ಯಾವುದೇ ಪ್ರಯೋಜನವೂ ಆಗುತ್ತಿಲ್ಲ ಎಂದು ಹಿರಿಯ ಮುಖಂಡರು, ಮಾಯಾವತಿಯವರಿಗೆ ದೂರು ನೀಡಿದ್ದಾರೆಂದು ಮೂಲಗಳು ತಿಳಿಸಿದ್ದು, ಅವರ ರಾಜೀನಾಮೆಗೆ ಖಚಿತ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ.

ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ನೀಡುವ ಒಂದು ಗಂಟೆ ಮುಂಚೆ ಚಾಮರಾಜನಗರ ಜಿಲ್ಲೆಯಲ್ಲಿ ಬಿಎಸ್ಪಿ ಕಾರ್ಯಕರ್ತರು ಮೈಸೂರು ದಸರಾ ವಿಚಾರದಲ್ಲಿ ಸಚಿವ ಮಹೇಶ್ ಅವರನ್ನು ಕಡೆಗಣನೆ ಮಾಡಿದ್ದಾರೆಂದು ಪ್ರತಿಭಟನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News