ಪಾಂಡವರು, ಕೌರವರ ಯುದ್ಧದಲ್ಲಿ ಗೆಲುವು ನಮ್ಮದೆ: ಶಾಸಕ ಶ್ರೀರಾಮುಲು

Update: 2018-10-11 14:44 GMT

ಬಳ್ಳಾರಿ, ಸೆ. 11: ಈ ಉಪ ಚುನಾವಣೆ ಮಹಾಭಾರತದ ಧರ್ಮಯುದ್ಧ ಇದ್ದದಂತೆ. ಪಾಂಡವರಾದ ನಮ್ಮ (ಬಿಜೆಪಿ) ವಿರುದ್ಧ ಕೌರವರಾದ ಕಾಂಗ್ರೆಸಿಗರು ಬರುತ್ತಿದ್ದಾರೆ. ಅಂತಿಮವಾಗಿ ಗೆಲುವು ನಮ್ಮದೆ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಹಾಭಾರತದಲ್ಲಿ ಕೌರವರು, ಪಾಂಡವರ ವಿರುದ್ಧ ಎಷ್ಟೇ ಒಳಸಂಚು ನಡೆಸಿದರೂ ಅಂತಿಮವಾಗಿ ಗೆಲುವು ಸಾಧಿಸಿದ್ದು ಪಾಂಡವರೇ. ಆ ಇತಿಹಾಸ ಇದೀಗ ಮತ್ತೆ ಮರುಕಳಿಸಲಿದೆ ಎಂದರು.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿದ್ದು ನಮ್ಮ ಸಾಧನೆ. ಇಲ್ಲಿ ಯಾರೇ ಬರಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಗೆದ್ದೇ ಗೆಲ್ಲುತ್ತೇವೆ ಎಂದು ಶ್ರೀರಾಮುಲು ನುಡಿದರು.

ಮೈತ್ರಿ ಸರಕಾರ ಅಥವಾ ಏಷ್ಟೇ ಪ್ರಭಾವಿಗಳೇ ಬರಲಿ ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ನಮ್ಮ ಕಾರ್ಯಕರ್ತರೇ ಆಸ್ತಿ. ಈ ಚುನಾವಣೆಯನ್ನು ಗೆದ್ದು ಇತಿಹಾಸ ಸೃಷ್ಟಿಸಬೇಕೆಂಬ ಛಲವನ್ನು ಇಟ್ಟುಕೊಂಡಿದ್ದೇನೆ ಎಂದು ಶ್ರೀರಾಮುಲು ನುಡಿದರು.

ನಾನು ಎಂದಿಗೂ ಬೆನ್ನು ತೋರಿಸಿ ಹೋಗುವ ಜಾಯಮಾನದವನಲ್ಲ. ಬಳ್ಳಾರಿ ಜನತೆ ನನಗೆ ನಾಲ್ಕೂವರೆ ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಹಿಂದೆ ಸಚಿವ, ಶಾಸಕನಾಗಿ ನನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿದ್ದೇನೆ. ಕ್ಷೇತ್ರದಿಂದ ಐದು ಜನರ ಪಟ್ಟಿಯನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ ಎಂದರು.

ನನ್ನ ಸಹೋದರಿ ಶಾಂತಾ ಅವರು ಓರ್ವ ಆಕಾಂಕ್ಷಿ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಬೇಕು. ಇಲ್ಲಿ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ. ಪಕ್ಷದ ಗೆಲುವು ಮುಖ್ಯ ಎಂದು ಶ್ರೀರಾಮುಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News