ಮಹಿಳೆಯರಿಗೆ ಕಾಯಕ ಯೋಜನೆಯಡಿ 10 ಲಕ್ಷದವರೆಗೆ ಸಾಲ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-10-11 15:20 GMT

ಚಿಕ್ಕಮಗಳೂರು, ಅ.11: ಮಹಿಳೆಯರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಕಾಯಕ ಯೋಜನೆಯಡಿ 10 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಮೂಡಿಗೆರೆ ತಾಲೂಕು ಬಣಕಲ್‍ನಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಿರುದ್ಯೋಗಿ ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳುವ ದೃಷ್ಟಿಯಿಂದ ನಮ್ಮ ಸರ್ಕಾರ ಹತ್ತು ಲಕ್ಷದವರೆಗೆ ಸಾಲ ನೀಡುವ ಕಾಯಕ ಯೋಜನೆಯನ್ನು ಜಾರಿಗೆ ತಂದಿದೆ. ಈ ಹತ್ತು ಲಕ್ಷ ಸಾಲದಲ್ಲಿ ಐದು ಲಕ್ಷ ಬಡ್ಡಿ ರಹಿತವಾಗಿ ನೀಡಲಾಗುವುದು. ಉಳಿದ ಐದು ಲಕ್ಷಕ್ಕೆ ಶೇ. 4 ರ ಬಡ್ಡಿ ದರದಲ್ಲಿ ನೀಡಲಾಗುವುದು ಎಂದು ಹೇಳಿದ ಅವರು, ನಮ್ಮ ಮೈತ್ರಿ ಸರ್ಕಾರ ರೈತರ ಶೋಷಿತರ, ದೀನ ದಲಿತರ ಉದ್ಧಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದರು.

ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ 48,000 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈತರ ಸುಮಾರು 50,000 ಸಾವಿರ ರೂ.ಗಳವರೆಗೆ ಸಾಲ ಮನ್ನಾ ಮಾಡಲಾಗಿತ್ತು. ಸಿದ್ದರಾಮಯ್ಯನವರ ಅವಧಿಯಲ್ಲಿನ ಬಾಕಿ ಸಾಲದ ಮೊತ್ತ 8165 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಈ ಸರ್ಕಾರ ನೀಡಿದೆ. ಚಿಕ್ಕಮಗಳೂರು ಜಿಲ್ಲೆಗೆ 158 ಕೋಟಿ ಸಾಲ ಮನ್ನಾ ಹಣ ಬಿಡುಗಡೆ ಮಾಡಲಾಗಿದ್ದು, 2ನೇ ಕಂತಿನಲ್ಲಿ 300 ಕೋಟಿಗಳನ್ನು ಸಾಲ ಮನ್ನಾಕ್ಕೆ ನಮ್ಮ ಮೈತ್ರಿ ಸರ್ಕಾರ ನೀಡಿದೆ ಎಂದು ಹೇಳಿದರು.

ಸಹಕಾರಿ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ 2 ಲಕ್ಷದವರೆಗೆ ಸಾಲಮನ್ನಾ ಮಾಡಲಾಗಿದೆ ಎಂದ ಅವರು ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಲು ಋಣಮುಕ್ತ ಕಾಯ್ದೆ ಜಾರಿಗೆ ತರಲಾಗಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ ಎಂದರು.
ರಾಜ್ಯದಲ್ಲಿ 22 ಲಕ್ಷ ರೈತರು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ದಕ್ಷಿಣ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಉತ್ತಮ ರೀತಿಯಲ್ಲಿ ಪ್ರಗತಿ ಹೊಂದಿದ್ದು, ಲಾಭದಾಯಕ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಬಣಕಲ್ ಸಹಕಾರಿ ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದ್ದು ಬೇರೆ ಸಂಘಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಹಕಾರಿ ಕ್ಷೇತ್ರ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ಕ್ಷೇತ್ರವಾಗಿದ್ದು, ಲಕ್ಷಾಂತರ ರೈತ ಕುಟುಂಬಗಳು ಸಹಕಾರ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿವೆ. ಬಣಕಲ್‍ನ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಬೇರೆ ಸಹಕಾರ ಸಂಘಗಳಿಗೆ ಆದರ್ಶಪ್ರಾಯವಾಗಿದೆ ಎಂದ ಅವರು ಸರ್ಕಾರಗಳ ಸಾಲ ಮನ್ನಾ, ಬಡ್ಡಿ ಮನ್ನಾದಿಂದ ಹಲವಾರು ರೈತರಿಗೆ ಪ್ರಯೋಜನವಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದೆ. ಬಯಲು ಪ್ರದೇಶದಲ್ಲಿ ಮಳೆಯಿಲ್ಲದೆ ಅನಾವೃಷ್ಟಿಯಾಗಿದೆ. ಅತಿಯಾದ ಮಳೆಯಿಂದಾಗಿ ಕಾಫಿ, ಮೆಣಸು, ಅಡಿಕೆ ಬೆಳೆ ಹಾನಿಯಾಗಿದ್ದು, ರೈತರು, ಕಾಫಿ ಬೆಳೆಗಾರರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳ ಏಳಿಗೆ ಕುಂಠಿತವಾದರೆ ರೈತರ ಏಳಿಗೆ ಕುಂಠಿತವಾದಂತೆ. ಸಹಕಾರ ಕ್ಷೇತ್ರದ ಭದ್ರತೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿರಬೇಕು. ಜಿಲ್ಲೆಯಲ್ಲಿ ರೈತರ 420 ಕೋಟಿ ಸಾಲ ಮನ್ನಾವಾಗಿದೆ ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಕಷ್ಟಗಳಿಗೆ ನೆರವಾಗುತ್ತಿವೆ ಎಂದರು. ಎಂ.ಪಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕರಾದ ಮೋಟಮ್ಮ, ಬಿ.ಬಿ.ನಿಂಗಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂ. ಸದಸ್ಯ ಬಣಕಲ್ ಶಾಮಣ್ಣ, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‍ನ ಕೆ.ಎನ್.ರಾಜಣ್ಣ, ಮೂಡಿಗೆರೆ ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ಸಿ.ರತನ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹಾಗೂ ಸಿ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಎಸ್, ಡೋಂಗ್ರ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News