ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ನರ್ಸ್, ಡಾಕ್ಟರ್ ಗಳಿಗೆ ಕಡಿಮೆಯಿಲ್ಲ: ಸಚಿವೆ ಜಯಮಾಲ

Update: 2018-10-11 15:54 GMT

ಮೈಸೂರು,ಅ.11: ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ನರ್ಸ್ ಮತ್ತು ಎಂಬಿಬಿಎಸ್ ಡಾಕ್ಟರ್ ಗಳಿಗಿಂತ ಕಡಿಮೆಯಿಲ್ಲ. ಅವರ ಸೇವೆ ಅಷ್ಟು ಮಹತ್ವದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಡಾ.ಜಯಮಾಲ ಬಣ್ಣಿಸಿದರು.

ಮಹಿಳಾ ಮತ್ತು ಮಕ್ಕಳ ಉಪದಸರಾ ಸಮಿತಿ ವತಿಯಿಂದ ಗುರುವಾರ ಜೆ.ಕ.ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಮತ್ತು ಮಕ್ಕಳ ದಸರಾವನ್ನು ಉದ್ಘಾಟಿಸಿ ಮಾತನಾಡಿದರು. ಯಾವ ಜನ್ಮದ ಪುಣ್ಯನೋ ಗೊತ್ತಿಲ್ಲ. ನಿಮ್ಮ ಸೇವೆ ಮಾಡುವ ಭಾಗ್ಯ ನನಗೆ ಒದಗಿ ಬಂದಿದೆ. ನಾನು ಸದಾ ಹೆಣ್ಣು ಮಕ್ಕಳ ಬಗ್ಗೆಯೇ ಯೋಚಿಸುತ್ತೇನೆ ಎಂದು ಹೇಳಿದರು.

ಒಟ್ಟು 65,911 ಅಂಗನವಾಡಿಗಳಿದ್ದು, ಅಂಗನವಾಡಿ ಶಿಕ್ಷಕರ, ಸಹಾಯಕಿಯರ ಕೆಲಸ ಎಷ್ಟು ಮಹತ್ವದ್ದು ಎಂದು ಗಮನಿಸಿದ್ದೇನೆ. ಅವರು ಮಾಡುವ ಕೆಲಸ ದೇವರ ಕೆಲಸ. ಅವರು ಮಾಡುವ ಕೆಲಸವನ್ನು ಡಾಕ್ಟರ್ ಕಲಿತವರು ಮಾಡಲ್ಲ. ಹಳ್ಳಿಗೆ ಹೋಗಿ ಕೆಲಸ ಮಾಡಲ್ಲ ಎನ್ನುತ್ತಾರೆ. ಅಂಗನವಾಡಿ ನೌಕರರು ಯಾವ ನರ್ಸ್, ಎಂಬಿಬಿಎಸ್ ಡಾಕ್ಟರ್ಸ್ ಗಳಿಗಿಂತ ಕಡಿಮೆಯಿಲ್ಲ. ನೀವು ನಿಜವಾದ ಸಮಾಜ ಸೇವಕಿಯರು. ನಿಮ್ಮ ಸೇವೆಯನ್ನು ಈ ಸಮಾಜ ತೆಗೆದುಕೊಂಡಿದೆ. ನೀವು ಪ್ರಶಸ್ತಿಯನ್ನೂ ಮೀರಿ ಬೆಳೆದವರು ನಿಮಗೆ ಹೃತ್ಪೂರ್ವಕ ಅಭಿನಂದನೆ ಎಂದರು.

ಸರ್ಕಾರ 25 ಸಾವಿರ ತುರ್ತು ನಿಧಿಯನ್ನು ಕೊಡುವ ಜೊತೆಯಲ್ಲಿ ಉದ್ಯೋಗಿನಿ ಯೋಜನೆಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ. ಒಂದು ಲಕ್ಷ ರೂ. ಇರೋದನ್ನು ಇತ್ತೀಚೆಗೆ ಮೂರು ಲಕ್ಷದವರೆಗೆ ಮಾಡಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಯ ಫಲವನ್ನು ಬೇರೆಯವರಿಗೂ ಹೇಳಬೇಕು. ನೀವೂ ಅದನ್ನು ಬಳಸಿಕೊಳ್ಳಬೇಕು ಎಂದರು.

ಇದಕ್ಕೂ ಮೊದಲು ಅರಮನೆ ಮುಂಭಾಗ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯನ್ನು ರಂಗೋಲಿ ಬಿಡಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಯುವತಿಯರು ಮಹಿಳೆಯರು ವಿವಿಧ ವಿನ್ಯಾಸದ, ವರ್ಣರಂಜಿತ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. 

ಕಾರ್ಯಕ್ರಮದಲ್ಲಿ ಶಾಸಕ ಹರ್ಷವರ್ಧನ್, ಜಿಲ್ಲಾ ಪಂಚಾಯತ್ ಸಿಇಓ ಕೆ.ಜ್ಯೋತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ರಾಧ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ, ಶಿವಲಿಂಗಪ್ಪ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News